ಮುಂಬೈ: ಇಲ್ಲಿನ ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ದಾಖಲಿಸಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸಾರ್ವಕಾಲಿಕ ಶ್ರೇಷ್ಠ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಬುಧವಾರ ವಿಶ್ವಕಪ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಕ್ರೀಸಿಗೆ ಬಂದ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಏಕದಿನ ಮಾದರಿಯಲ್ಲಿ 50ನೇ ಶತಕ ದಾಖಲಿಸುವುದರೊಂದಿಗೆ ಸಚಿನ್ ಅವರ ಹೆಸರಲ್ಲಿದ್ದ 49 ಅತೀ ಹೆಚ್ಚು ಶತಕದ ದಾಖಲೆ ಮುರಿದರು.
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ 452 ಪಂದ್ಯಗಳಲ್ಲಿ 49 ಶತಕದೊಂದಿಗೆ ಅತೀ ಹೆಚ್ಚು ಶತಕ ಬಾರಿಸಿದ ಕ್ರಿಕೆಟಿಗರಾಗಿದ್ದಾರೆ. ಪ್ರಸ್ತುತ ಈ ದಾಖಲೆ ಮುರಿದ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ 290 ಪಂದ್ಯಗಳಲ್ಲಿ 50 ಏಕದಿನ ಶತಕ ಸಿಡಿಸಿ ವಿಶ್ವಕಪ್ 2023ರಲ್ಲಿ ತಮ್ಮ ಮೂರನೇ ಶತಕ ದಾಖಲಿಸಿದರು.
ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ದ 41.4 ಓವರ್ ಗಳಲ್ಲಿ 297 ರನ್ ಪೇರಿಸಿ ಒಂದು ವಿಕೆಟ್ ಕಳೆದುಕೊಂಡಿದೆ.