ಮಾಧ್ಯಮದಲ್ಲಿ ಶುದ್ಧ ಕನ್ನಡ ಬಳಕೆ ಹಾಗೂ ರಾಷ್ಟ್ರದ ಬಗೆಗಿನ ಕಾರ್ಯಕ್ರಮಕ್ಕಾಗಿ ಒತ್ತಾಯ | ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹ

ಪುತ್ತೂರು: ಖಾಸಗಿ ದೂರದರ್ಶನ ಮಾಧ್ಯಮ ಹಾಗೂ ಬಾನುಲಿ ಕೇಂದ್ರಗಳಲ್ಲಿ ಶುದ್ಧ ಕನ್ನಡವನ್ನೇ ಬಳಸುವಂತೆ ಹಾಗೂ ಎಲ್ಲಾ ದೂರದರ್ಶನ ವಾಹಿನಿಗಳಲ್ಲಿ ಕಡ್ಡಾಯವಾಗಿ ದಿನಕ್ಕೆ ಒಂದು ತಾಸಿನಷ್ಟು ಹೊತ್ತು ದೇಶದ ಉತ್ಕೃಷ್ಟತೆಯ ಬಗ್ಗೆ ಕಾರ್ಯಕ್ರಮ ನೀಡುವಂತೆ ಸರಕಾರ ಸೂಕ್ತ ನಿರ್ದೇಶ ನೀಡುವಂತೆ ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವನೀತ್ ತಿಳಿಸಿದ್ದಾರೆ.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,, ಈ ಕುರಿತು ಪುತ್ತೂರು ಶಾಸಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಕನ್ನಡದ ಬೆಳವಣಿಗೆಗೆ ಸರ್ಕಾರಾದಿಯಾಗಿ ಕನ್ನಡ ಪರ ಸಂಘಟನೆಗಳು, ಹಿರಿ-ಕಿರಿ ಸಾಹಿತಿಗಳು ಮಾತ್ರವಲ್ಲದೆ ಪ್ರಜ್ಞಾವಂತ ಕನ್ನಡಾಭಿಮಾನಿ ನಾಗರಿಕರು ನಿರಂತರವಾಗಿ ಶ್ರಮವಹಿಸುತ್ತಿದ್ದಾರೆ. ಆದರೆ ಕನ್ನಡದ ಖಾಸಗಿ ಸುದ್ದಿವಾಹಿನಿಗಳಲ್ಲಿ ವಾರ್ತಾವಾಚಕರ ಮತ್ತು ವರದಿಗಾರರ ಮುಖಾಂತರ ಪ್ರಸ್ತುತಗೊಳ್ಳುತ್ತಿರುವ ಭಾಷೆ, ಕನ್ನಡಕ್ಕೆ ಹಾನಿಯನ್ನುಂಟುಮಾಡುತ್ತಿದೆ. ಅತ್ತ ಇಂಗ್ಲೀಷೂ ಅಲ್ಲದ, ಇತ್ತ ಕನ್ನಡವೂ ಅಲ್ಲದ ಕಂಗ್ಲೀಷ್ ಭಾಷೆ ನಿರಂತರವಾಗಿ ಕನ್ನಡಿಗರ ಮನೆ-ಮನಗಳಲ್ಲಿ ಪ್ರತಿಧ್ವನಿಸುತ್ತಿದೆ. ಇಂತಹ ಭಾಷೆಯನ್ನೇ ದಿನಪೂರ್ತಿ ಕೇಳುವ ಎಳೆಯ ಮಕ್ಕಳಲ್ಲಿ ಶುದ್ಧ ಕನ್ನಡದ ಸಾಹಿತ್ಯ ಮರೆಯಾಗುವ ಅಪಾಯವಿದೆ. ಅದರಲ್ಲೂ ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ವ್ಯಕ್ತವಾಗುತ್ತಿರುವ ಭಾಷೆಯಂತೂ ಗಾಬರಿ ಹುಟ್ಟಿಸುವಂತಿದೆ. ಹಾಗಾಗಿ ಮಾಧ್ಯಮ ಮಿತ್ರರೂ ಈ ನೆಲೆಯಲ್ಲಿ ಪ್ರಯತ್ನ ಪಡುವಂತೆ ಅವರು ತಿಳಿಸಿದರು.































 
 

ದಿನಪತ್ರಿಕೆಗಳು ಹಾಗೂ ಆಕಾಶವಾಣಿ ಬಾನುಲಿ ಕೇಂದ್ರಗಳು ಶುದ್ಧ ಕನ್ನಡ ಸಾಹಿತ್ಯವನ್ನು ಪ್ರತಿದಿನವೂ ಜನರಿಗೆ ಉಣಬಡಿಸುತ್ತಿವೆ. ಈ ಮಾದರಿಯಲ್ಲೇ ಖಾಸಗಿ ದೂರದರ್ಶನಗಳು ಹಾಗೂ ಬಾನುಲಿ ಕೇಂದ್ರಗಳು ಕಾರ್ಯನಿರ್ವಹಿಸಬೇಕೆಂದು ಅವರು ಮನವಿ ಮಾಡಿದರು.

ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಿಯಾಲ್ ಆಳ್ವಾ ಮಾತನಾಡಿ, ಮಾಧ್ಯಮಗಳು ಜನರ ಮೇಲೆ ಬೀರುವ ಪರಿಣಾಮ ಅಪಾರವಾದದ್ದು. ಹಾಗಾಗಿಯೇ ಮಾಧ್ಯಮಗಳು ಜನರಲ್ಲಿ ಚಿಂತನೆಯನ್ನು ರೂಪಿಸುವ, ಬದಲಾಯಿಸುವ ಶಕ್ತಿಯನ್ನು ಹೊಂದಿವೆ. ಅದರಲ್ಲೂ ಪಾರಂಪರಿಕ ಮಾಧ್ಯಮಗಳಲ್ಲೊಂದಾದ ದೃಶ್ಯ ಮಾಧ್ಯಮ ನೋಡುಗರ ಅಂತರಂಗವನ್ನು ಬಹುಸುಲಭಕ್ಕೆ ತಲಪಿಬಿಡುತ್ತದೆ ಮತ್ತು ವಿಷಯವೊಂದನ್ನು ಬಲವಾಗಿ ಸ್ಥಾಪಿಸಿಬಿಡುತ್ತದೆ ಎಂದ ಅವರು,  ಪ್ರಸ್ತುತ ಕಾರ್ಯಾಚರಿಸುತ್ತಿರುವ ೯೦೦ಕ್ಕೂ ಅಧಿಕ ವಾಹಿನಿಗಳು ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಈ ವಾಹಿನಿಗಳು ದೇಶದ ಬಗೆಗಿನ ಸಕಾರಾತ್ಮಕ ಸಂಗತಿಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ರೂಪುಗೊಳಿಸಬೇಕಾದ್ದು ಸಮಾಜದ ದೃಷ್ಟಿಯಿಂದ ಅನಿವಾರ್ಯ ಎಂದ ಅವರು, ಇಂದು ಮನರಂಜನೆಯ ಹೆಸರಿನಲ್ಲಿ ಕುಟುಂಬದ ಬಂಧವನ್ನು ಸಡಿಲಿಸುವ ಧಾರಾವಾಹಿಗಳು ನಿರಂತರವಾಗಿ ಮನೆಮನಗಳನ್ನು ತಪುತ್ತಿವೆ. ಅಶ್ಲೀಲತೆಯ ಗೆರೆಯನ್ನೂ ಮೀರಿ ಅನೇಕ ದೃಶ್ಯಾವಳಿಗಳು ನಮ್ಮ ಮನೆಯೊಳಗೆ, ಮಕ್ಕಳ ಮುಂದೆ ಬಿತ್ತರಗೊಳ್ಳುತ್ತಿವೆ. ಸುದ್ದಿಯ ಹೆಸರಿನಲ್ಲಿ ವೈಭವೀಕರಣ, ಕಿರಿಚಾಡುವಿಕೆಗಳು ನಡೆಯುತ್ತಿವೆ. ಇದಕ್ಕೆಲ್ಲಾ ಸಮಯ ಹೊಂದಿಸುವ ವಾಹಿನಿಗಳು ದೇಶದ ಸಾರ್ವಭೌಮತ್ವಕ್ಕೆ ಪೂರಕವಾದ ಸುದ್ದಿ ಅಥವ ವಿಶೇಷ ಕಾರ್ಯಕ್ರಮಕ್ಕೆ ಸಮಯ ಹೊಂದಿಸುವ ಬಗೆಗೆ ಚಿಂತಿಸಬೇಕಾದ ಅಗತ್ಯವಿದೆ ಎಂದು ಹೇಳಿದರು

ಪತ್ರಿಕಾಗೋಷ್ಟಿಯಲ್ಲಿ ವಿದ್ಯಾರ್ಥಿ ಸಂಘದ ತರಗತಿ ಪ್ರತಿನಿಧಿಗಳಾದ ಗುರುಪ್ರಸಾದ್, ಮಾನ್ಯ, ಶರಣ್ಯಾ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top