ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಬಲಿಪಾಡ್ಯಮ ದಿನವಾದ ಸೋಮವಾರ ಗೋಧೋಳಿ ಸಮಯದಲ್ಲಿ ಸಾಮೂಹಿಕ ಗೋಪೂಜೆ ದೇವಸ್ಥಾನದ ಗೋಶಾಲೆಯಲ್ಲಿ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ವಿ.ಎಸ್. ಭಟ್ ಹಾಗೂ ವಸಂತ ಕೆದಿಲಾಯ ಗೋಶಾಲೆ ಆವರಣದಲ್ಲಿ ಗೋಪೂಜೆಯ ವಿಧಿ ವಿಧಾನಗಳನ್ನು ನಡೆಸಿದರು. ಪ್ರಶಾಂತ್ ಭಟ್ ಸಹಕರಿಸಿದರು. ಮಹಿಳೆಯರಿಂದ ಗೋಪೂಜೆ ಸೇವೆ ನಡೆಯಿತು. ಬಳಿಕ ಗೋವುಗಳಿಗೆ ಹೂವಿನ ಹಾರ ಹಾಕಿ ಅವಲಕ್ಕಿ, ದೋಸೆಯನ್ನು ತಿನ್ನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಮೂರು ವರ್ಷಗಳಿಂದ ಗೋಪೂಜೆ ಮಾಡುತ್ತಾ ಬಂದಿದ್ದೇವೆ. ಕಳೆದ ವರ್ಷದಿಂದ ಗೋಶಾಲೆ ತೆರೆದಿದ್ದೇವೆ. ಈ ಭಾರಿಯೂ ಗೋಪೂಜೆ ನಡೆದಿದೆ. ಈ ಸಂದರ್ಭದಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ನೆನಪಿಸಬೇಕಾಗುತ್ತದೆ. ಏಕೆಂದರೆ ದೇಶಿ ವಿವಿಧ ತಳಿಗಳ ಪುನರುತ್ಥಾನಕ್ಕಾಗಿ ಗೋವಿನ ಆಂದೋಲನ ಮಾಡುವಲ್ಲಿ ಅವರ ಅನುಗ್ರಹ ನೆನಪಿಸಿಕೊಳ್ಳಬೇಕಾಗುತ್ತದೆ. ಈ ಆಂದೋಲನದ ಪರಿಣಾಮ ಭಾರತದಾದ್ಯಂತ ಗೋವಿನ ಬಗ್ಗೆ ಜಾಗೃತಿ ಜಾಸ್ತಿಯಾಗಿದೆ. ಹಾಗೆಯೇ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಮಹಾಲಿಂಗೇಶ್ವರನ ಅಭಿಷೇಕಕ್ಕೋಸ್ಕರ ದೇಶಿ ತಳಿಯನ್ನು ಸಾಕುತ್ತಿದ್ದೇವೆ. ದೇಶಿ ತಳಿ ಗೋವಿನ ಹಾಲು ಪೌಷ್ಠಿಕಾಂಶದಿಂದ ಕೂಡಿದೆ. ಈ ನಿಟ್ಟಿನಲ್ಲಿ ದೇಶಿ ತಳಿ ಗೋವಿನ ಸಾಕಣೆಯನ್ನು ಹೆಚ್ಚಿಸುವ ಯೋಜನೆಯಿದೆ. ಇದಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರೇರಣೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ಡಾ.ಸುಧಾ ಎಸ್. ರಾವ್, ವೀಣಾ ಬಿ.ಕೆ., ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ, ಗೋಪೂಜೆ ಸೇವಾಕರ್ತರು, ಭಕ್ತಾದಿಗಳು ಉಪಸ್ಥಿತರಿದ್ದರು.