ಕಾಣಿಯೂರು: ವ್ಯಕ್ತಿಯೊಬ್ಬರು ವಿಪರೀತ ಮದ್ಯ ಸೇವನೆಯಿಂದ ಮೃತಪಟ್ಟ ಘಟನೆ ಕಾಣಿಯೂರಿನಲ್ಲಿ ನಡೆದಿದೆ.
ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಅಬ್ಬಡದ ಲೋಕಯ್ಯ (43 ವರ್ಷ) ಮೃತಪಟ್ಟವರು.
ಕಳೆದ 20 ವರ್ಷಗಳ ಹಿಂದೆ ಅವರು ಶೋಭಾ ಎಂಬವರ ಜೊತೆ ವಿವಾಹವಾಗಿದ್ದರು. ಆದರೆ ಸಂತಾನ ಭಾಗ್ಯ ಒಲಿದು ಬಂದಿರಲಿಲ್ಲ. ಇದರಿಂದ ನೊಂದು ಮದ್ಯ ಸೇವನೆ ಮಾಡಲು ಶುರು ಮಾಡಿಕೊಂಡಿದ್ದರು. ಇತ್ತೀಚೆಗೆ ಸುಮಾರು 4 ವರ್ಷಗಳಿಂದ ಲೋಕಯ್ಯ ಗೌಡರು ಕೂಲಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ಮದ್ಯ ಸೇವನೆ ಅಧಿಕವಾಗಿ ಸಮಯಕ್ಕೆ ಸರಿಯಾಗಿ ಅನ್ನ ಆಹಾರ ಇಲ್ಲದೇ ನಿತ್ರಾಣಗೊಂಡಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಾವಿಗೆ ಶರಣಾಗಿದ್ದಾರೆ. ಭಾನುವಾರ ಪತ್ನಿ ಶೋಭಾ ಬೆಳಗ್ಗೆ ಕೂಲಿ ಕೆಲಸಕ್ಕೆ ಹೋಗಿದ್ದು, ಸಂಜೆ ಮನೆಗೆ ಬಂದಾಗ ಮನೆಯ ಹಾಲ್ ನಲ್ಲಿ ಲೋಕಯ್ಯ ಗೌಡರು ಬಿದ್ದುಕೊಂಡಿದ್ದು, ಅವರ ಬಾಯಿಯಿಂದ ಬಿಳಿ ನೊರೆ ಬಂದಿದ್ದು, ಘಾಟು ವಾಸನೆ ಬರುತ್ತಿತ್ತು . ಮುಟ್ಟಿ ನೋಡಿದಾಗ ಮೈ ತಣ್ಣಗಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.