ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯುವ ವಸ್ತ್ರ ವಿತರಣೆ, ಸಹಭೋಜನ ಕಾರ್ಯಕ್ರಮ “ಸೇವಾ ಸೌರಭ” ಕಾರ್ಯಕ್ರಮದ ಅಂಗವಾಗಿ ಎಲ್ಲಾ ಸಿದ್ಧತೆಗಳು ಸಂಪೂರ್ಣಗೊಂಡಿದೆ.
ಈಗಾಗಲೇ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ವಸ್ತ್ರ ವಿತರಣೆಗಾಗಿ ಬೃಹತ್ ಪೆಂಡಾಲ್ ನ್ನು ನಿರ್ಮಿಸಲಾಗಿದ್ದು, 8 ರಿಂದ 10 ಸಾವಿರ ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಸುಮಾರು 20 ಕೌಂಟರ್ ಗಳು ಸಹಿತ ಊಟೋಪಚಾರ ವ್ಯವಸ್ಥೆಗೆ 15 ರಿಂದ 20 ಕೌಂಟರ್ ಗಳ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿ ಗಣ್ಯರಿಗೆ ಊಟೋಪಚಾರದ ವ್ಯವಸ್ಥೆಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 100 ರಿಮದ 150 ಮಂದಿ ಏಕಕಾಲದಲ್ಲಿ ಭೋಜನ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಸುಮಾರು 50 ರಿಂದ 60 ಸಾವಿರ ಮಂದಿ ಆಗಮಿಸುವ ನಿರೀಕ್ಷೆಯಿದ್ದು ಎಲ್ಲಾ ತಯಾರಿಗಳು ಭರದಿಂದ ಸಾಗುತ್ತಿದೆ.
ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದು, ರೈ ಏಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಸಭೆ ಸಭಾಪತಿ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.
ಪುತ್ತೂರು ಮಾಯಿದೇ ದೇವುಸ್ ಚರ್ಚ್ ಧರ್ಮಗುರು ವಿ.ರೆ.ಫಾ.ಲಾರೆನ್ಸ್ ಮಸ್ಕರೇನಸ್ ಶುಭಾಸಂಶನೆ ಮಾಡುವರು. ಧಾರ್ಮಿಕ ಮುಖಂಡ ಜ.ಹುಸೈನ್ ದಾರಿಮಿ ರೆಂಜಿಲಾಡಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕೆಪಿಸಿಸ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೈ ಎಂ.ಬಿ., ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ, ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಪ್ರಗತಿಪರ ಕೃಷಿಕ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ಜಿಪಂ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್, ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಟ್ರಸ್ಟ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ಕೃಷ್ಣ ಪ್ರಸಾದ್ ಬೊಲ್ಲಾವು ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಬಡ ಸಾಧಕರಿಗೆ ಸನ್ಮಾನ ನಡೆಯಲಿದೆ. ಮಧ್ಯಾಹ್ನ 12.30 ರಿಂದ ಶೃಂಗೇರಿ ಶ್ರೀ ಶಾರದ ಅಂಧರ ಗೀತಗಾಯನ ಕಲಾ ಸಂಘದಿಂದ ಗೀತಗಾಯನ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.