ಪುತ್ತೂರು: ದರೋಡೆಕೋರನಾದ ರತ್ನಾಕರನೆಂಬ ಬೇಡನು ದೇವರ್ಷಿ ನಾರದರ ಉಪದೇಶದ ಮೇರೆಗೆ ರಾಮಾಯಣದಂತಹ ಬೃಹದ್ಗ್ರಂಥವನ್ನು ರಚಿಸಿ ಆದಿಕವಿ ವಾಲ್ಮೀಕಿ ಎನಿಸಿಕೊಂಡನು ಎಂದು ಸಾಹಿತಿ, ನಿವೃತ್ತ ಉಪನ್ಯಾಸಕ ಪ್ರೊ. ಹರಿನಾರಾಯಣ ಮಾಡಾವು ಹೇಳಿದರು.
ಅವರು ಸಂಸ್ಕಾರ ಭಾರತೀ ಪುತ್ತೂರು ಘಟಕದ ವತಿಯಿಂದ ದರ್ಬೆ ಶಶಿಶಂಕರ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ನಮನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
24,000 ಶ್ಲೋಕಗಳನ್ನೊಳಗೊಂಡ ರಾಮಾಯಣ ಗ್ರಂಥದ ಸಾರವು ಇಂದಿಗೂ ಪ್ರಸ್ತುತ ಎಂದ ಅವರು, ವಾಲ್ಮೀಕಿಯ ಪೂರ್ವೇತಿಹಾಸದ ಸವಿಸ್ತಾರವಾದ ವಿವರಗಳನ್ನು ನೀಡಿದರು.
ಸದಸ್ಯೆ ಶಂಕರಿ ಶರ್ಮ ವಾಲ್ಮೀಕಿ ನುಡಿನಮನ ಸಲ್ಲಿಸಿ, ರಾಮಾಯಣದಲ್ಲಿರುವ ವಿಭಿನ್ನ ಪಾತ್ರಗಳು ಇಂದಿಗೂ ಜೀವಂತ ನಿದರ್ಶನದಂತಿವೆ ಎಂದರು. ಸದಸ್ಯೆಯರಾದ ವಿದುಷಿ ಪ್ರೀತಿಕಲಾ, ವಿದುಷಿ ಮೇಘನಾ ಪಾಣಾಜೆ ರಾಮಾಯಣದ ಉತ್ತರ ಕಾಂಡದಿಂದ ಆಯ್ದ ಶ್ಲೋಕಗಳ ವಿವರಣಾತ್ಮಕ ಗಾಯನದ ಮೂಲಕ ವಾಲ್ಮೀಕಿ ಗೀತ ನಮನಗೈದರು. ಸದಸ್ಯೆ ಕೃಷ್ಣವೇಣಿ ಮುಳಿಯ ರಾಮಾಯಣದ ರಸಪ್ರಶ್ನೆಗಳನ್ನು ಆಯೋಜಿಸಿದರು. ಪುತ್ತೂರು ಘಟಕದ ಸಂಘಟನಾ ಕಾರ್ಯದರ್ಶಿ ವಿದ್ವಾನ್ ದೀಪಕ್ ಕುಮಾರ್ ರಾಮಾಯಣ ಉತ್ತರ ಕಾಂಡದ ಆಯ್ದ ಕೆಲವು ಶ್ಲೋಕಗಳಿಗೆ ಅತ್ಯಂತ ಭಾವಪೂರ್ಣ ನೃತ್ಯಾಭಿನಯವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತೀ ದ.ಕ.ಜಿಲ್ಲೆ ಕಾರ್ಯದರ್ಶಿ ನಾಗರಾಜ ಶೆಟ್ಟಿ, ಸನಾತನ ನಾಟ್ಯಾಲಯದ ನಿರ್ದೇಶಕ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್, ಸದಸ್ಯ ವಿದ್ವಾನ್ ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಶಂಖನಾದ, ಓಂಕಾರನಾದ ಹಾಗೂ ಧ್ಯೇಯಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಜಿಲ್ಲಾ ಉಪಾಧ್ಯಕ್ಷೆ ರೂಪಲೇಖಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಾಲಿಂಗೇಶ್ವರ ಭಜನ ಸೇವಾ ಟ್ರಸ್ಟ್ ನ ಸಂಸ್ಕಾರ ಭಾರತೀ ಸದಸ್ಯರ ವತಿಯಿಂದ ಭಜನ ನಮನ ನಡೆಯಿತು.