ಪುತ್ತೂರು: ಪುತ್ತೂರು ನಗರಸಭೆ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್, ನಗರಸಭೆ ಪೌರಸೇವಾ ನೌಕರರ ಸಂಘ ಹಾಗೂ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸಹಯೋಗದೊಂದಿಗೆ ಪೌರ ಕಾರ್ಮಿಕರು ಹಾಗೂ ಪೌರ ಸೇವಾ ನೌಕರರಿಗೆ ವೈದ್ಯಕೀಯ ತಪಾಸಣಾ ಶಿಬಿರ ನ.8 ರಂದು ಪುತ್ತೂರು ನಗರಸಭೆ ಸಭಾಂಗಣದಲ್ಲಿ ನಡೆಯಿತು.

ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಗಿಡಕ್ಕೆ ನೀರು ಎರೆಯುವ ಮೂಲಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ನಗರಸಭೆ ಸಿಬ್ಬಂದಿಗಳು ಅದರಲ್ಲೂ ತ್ಯಾಜ್ಯ ವಿಲೇವಾರಿ, ನೀರು ಸರಬರಾಜು, ಬೀದಿ ದೀಪ ನಿರ್ವಹಣೆ ಸಿಬ್ಬಂದಿಗಳು ದಿನನಿತ್ಯ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಕಷ್ಟಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಕನಿಷ್ಠ ವರ್ಷಕ್ಕೆ ಮೂರು ಬಾರಿಯಾದರೂ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಗಮನಹರಿಸಬೇಕು. ಇದಕ್ಕೆ ಇಂತಹಾ ವೈದ್ಯಕೀಯ ತಪಾಸಣೆ ಶಿಬಿರ ಸಹಕಾರಿಯಾಗಲಿದ್ದು, ಅವಕಾಶ ಒದಗಿಸಿಕೊಟ್ಟಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆವಿಜಿ ಮೆಡಿಕಲ್ ಕಾಲೇಜಿನ ಇಎನ್‍ಟಿ ಪ್ರೊಫೆಸರ್ ಶ್ವೇತಾ ಮಾತನಾಡಿ, ತಪಾಸಣೆ ಸಂದರ್ಭ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಮಾತನಾಡಿ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿಂದ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವೈದ್ಯಕೀಯ ಶಿಬಿರಗಳನ್ನು ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗುವುದು. ಇದೀಗ ನಗರಸಭೆಯಿಂದ ಆರಂಭಗೊಂಡಿದೆ. ಶಿಬಿರದಿಂದ ಉತ್ತಮ ಪ್ರಯೋಜನ ಸಿಗಲಿ ಎಂದು ಶುಭ ಹಾರೈಸಿದರು.
ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಕರುಣಾಕರ ವೀರಮಂಗಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿಗಳಾದ ಪ್ರವೀನ್ ಕುಂಟ್ಯಾನ, ಯತೀಶ್ ಎನ್., ಪ್ರೇರಣಾ ಸಂಸ್ಥೆ ಮ್ಯಾನೇಜರ್ ದಯಾಮಣಿ, ನಗರಸಭೆ ಹಿರಿಯ ಆರೋಗ್ಯಾಧಿಕಾರಿ ಶ್ವೇತಾ ಕಿರಣ್ ಅತಿಥಿಗಳನ್ನು ಗೌರವಿಸಿದರು. ಟ್ರಸ್ಟ್ ನ ಟ್ರಸ್ಟಿ ವಸಂತ ವೀರಮಂಗಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಳಿಕ ಶಿಬಿರದಲ್ಲಿ ಪೌರ ಕಾರ್ಮಿಕರು ಹಾಗೂ ಪೌರ ಸೇವಾ ನೌಕರರಿಗೆ ಕೆವಿಜಿ ಮೆಡಿಕಲ್ ಹಾಗೂ ಆಸ್ಪತ್ರೆಯ ತಜ್ಞ ವೈದ್ಯರಿಂದ ಜನರಲ್ ಮೆಡಿಸಿನ್, ಶಸ್ತ್ರ ಚಿಕಿತ್ಸೆ, ಮಕ್ಕಳ ರೋಗ, ಗಂಟಲು, ಮೂಗು, ಕಿವಿ, ಥೈರಾಯಿಡ್, ಕಿವಿ ಸೋರುವಿಕೆ, ನೇತ್ರ ಚಿಕಿತ್ಸೆ, ಚರ್ಮ ಹಾಗೂ ಲೈಂಗಿಕ, ಸ್ತ್ರೀರೋಗ, ಎಲುಬು ಮತ್ತು ಕೀಲು ಸಂಬಂಧಿತ ಖಾಯಿಲೆ, ಶ್ವಾಸಕೋಶ ಮುಂತಾದ ಕಾಯಿಲೆಗಳಿಗೆ ತಪಾಸಣೆ ನಡೆಸಿ ಔಷಧಿಗಳನ್ನು ನೀಡಲಾಯಿತು.