ಮಕ್ಕಳ ಹಕ್ಕುಗಳ ರಕ್ಷಣೆ ಸರಕಾರದ ಕರ್ತವ್ಯ | ಶಾಸಕರೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ | ಬೇಡಿಕೆಯ ಸುರಿಮಳೆಗೈದ ವಿವಿಧ ಶಾಲಾ ವಿದ್ಯಾರ್ಥಿಗಳು

ಪುತ್ತೂರು: ಶಾಲಾ ಕೊಠಡಿ ಛಾವಣಿ ಸರಿಯಿಲ್ಲ, ಆವರಣ ಗೋಡೆ ಬೇಕು, ನಮಗೆ ಸ್ಮಾರ್ಟ್ ಕ್ಲಾಸ್ ಬೇಕು, ಸುಸಜ್ಜಿತ ಪ್ರಯೋಗ ಶಾಲೆ ಕೊಡಿ, ಶಿಕ್ಷಕರು ಬೇಕು, ಶಾಲೆಗೆ ಸುಣ್ಣ ಬಣ್ಣ ಬಳಿಯಬೇಕು, ಸರಿಯಾಗಿ ಶಾಲಾ ಸಮಯ ತಲುಪಲು ಬಸ್ಸಿನ ವ್ಯವಸ್ಥೆ ಮಾಡಿ ಹೀಗೆ ಬೇಡಿಕೆಯ ಸುರಿ ಮಳೆಯನ್ನೇ ಮುಂದಿಟ್ಟರು ತಾಲೂಕಿನ ವಿವಿಧ ಸರಕಾರಿ ಶಾಲಾ ಮಕ್ಕಳು.

ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ, ಅಸಹಾಯಕರ ಸೇವಾ ಟ್ರಸ್ಟ್ ಹಾಗೂ ಪುತ್ತೂರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಆಡಳಿತದಲ್ಲಿ ಮಕ್ಕಳು ಯೋಜನೆಯನ್ವಯ ಶಾಸಕರೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಬೇಡಿಕೆಯ ಸುರಿಮಳೆಗೈದರು.

ಸಂಟ್ಯಾರು ಶಾಲೆಯಲ್ಲಿ ಶಾಲಾ ಕಟ್ಟಡದ ಛಾವಣಿಯ ರೀಪುಗಳು ಸರಿಯಿಲ್ಲ. ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ವಿದ್ಯಾರ್ಥಿಗಳು ತಿಳಿಸಿದಾಗ, ಈಗಾಗಲೇ ಪಿಆರ್‍ ಡಿಯಿಂದ ದುರಸ್ತಿ ಕಾರ್ಯ ನಡೆಯುತ್ತಿದೆ. ಇವುಗಳ ಜವಾಬ್ದಾರಿ ಗ್ರಾಪಂಗೆ ಇದೆ. ನರೇಗಾದಿಂದ ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೇಳಿದರು.































 
 

ನರಿಮೊಗರು ಶಾಲಾ ವಿದ್ಯಾರ್ಥಿನಿ ಚಿಂತನ ಶಾಲೆ ಬಿಡುವ ವೇಳೆ ರಸ್ತೆ ದಾಟಲು ಸಮಸ್ಯೆ ಉಂಟಾಗಿದೆ. ಈ ನಿಟ್ಟಿನಲ್ಲಿ ಬ್ಯಾರಿಕೇಡ್ ಅಳವಡಿಸುವಂತೆ ವಿನಂತಿಸಿದರು. ಈ ಕುರಿತು ಶಾಸಕರ ಗಮನಕ್ಕೆ ತಂದು ವ್ಯವಸ್ಥೆ ಮಾಡುವಂತೆ ಒತ್ತಾಯಿಸಲಾಗುವುದು ಎಂದು ಪರಿವೀಕ್ಷಣಾಧಿಕಾರಿ ಸುಂದರ ಗೌಡ ಹೇಳಿದರು.

ಕೋಡಿಂಬಾಡಿ ಶಾಲೆಗೆ ಆವರಣ ಗೋಡೆ, ಸಿಸಿ ಕ್ಯಾಮರಾ, ಅಕ್ಷರದಾಸೋಹ ಕುಚ್ಚಲಕ್ಕಿ ನೀಡುವಂತೆ ವಿದ್ಯಾರ್ಥಿನಿ ವಿನಂತಿಸಿದಾಗ ಗ್ರಾಮಕ್ಕೊಂದು ಶಾಲಾ ಯೋಜನೆಯಡಿ ವ್ಯವಸ್ಥೆ ಮಾಡಿ ಸೌಲಭ್ಯ ಒದಗಿಸಲಾಗುವುದು ಎಂದು ಸುಂದರ ಗೌಡ ತಿಳಿಸಿದರು.

ಉಳಿದಂತೆ ಮುಂಡೂರು, ಸಂಟ್ಯಾರು, ಬೆಳ್ಳಿಪ್ಪಾಡಿ, ಚಿಕ್ಕಮುಡ್ನೂರು, ತಾಲೂಕನ ಬಹುತೇಕ ಸರಕಾರಿ ಶಾಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲಾ ಸಮಸ್ಯೆಯನ್ನು ಸಂವಾದದಲ್ಲಿ ತೋಡಿಕೊಂಡರು.

ಸಂವಾದದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಬಸ್ಸುಗಳ ಸಮಸ್ಯೆಗೆ ಶೀಘ್ರವೇ ಪರಿಹಾರ ನೀಡಲಾಗುವುದು. ಶಿಕ್ಣಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಭಾಷಾವಾರು ಶಿಕ್ಷಕರ ನೇಮಕ ಮಾಡಲಾಗಿದೆ. ಮಕ್ಕಳ ಬೇಡಿಕೆಗಳ ಗಂಭೀರ ಪರಿಗಣನೆ ಮಾಡುತ್ತೇವೆ. ಮಕ್ಕಳ ಹಕ್ಕುಗಳ ರಕ್ಷಣೆ ಸರಕಾರದ ಕರ್ತವ್ಯ. ಪಕ್ಷದವರ ಕಾರ್ಯಕ್ರಮಕ್ಕೆ ಮಕ್ಕಳೇ ಹೋಗಬೇಡಿ, ಜೈ ಹಾಕಲು ಹೋಗಬೇಡಿ. ಮಕ್ಕಳ ರಕ್ಷಣೆ , ಶಿಕ್ಷಣ ಸರಕಾರದ ಕರ್ತವ್ಯವಾಗಿದೆ. ಮಕ್ಕಳ ಮೇಲಿನ ದೌರ್ಜನ್ಯತಡೆಗೆ ಕಠಿಣ ಕಾನೂನು ಅಗತ್ಯವಾಗಿದೆ ಎಂದ ಅವರು, ತಂದೆ ತಾಯಿಗೆ ಉತ್ತಮ ಮಕ್ಕಳಾಗಿ ತಪ್ಪು ದಾರಿಗೆ ಹೋಗಬೇಡಿ. ಸ್ವಚ್ಚತೆ, ಓದಿನ ಕಡೆ ಹೆಚ್ಚಿನ ಗಮನ ಕೊಡಿ ಎಂದರು.

ವೇದಿಕೆಯಲ್ಲಿ ಅಸಹಾಯಕರ ಸೇವಾ ಟ್ರಸ್ಡ್ ನ ಅಧ್ಯಕ್ಷೆ ನಯನಾ ರೈ, ಮಕ್ಕಳ ಹಕ್ಕುಗಳ ಅಧಿಕಾರಿ ನಝೀರ್, ಪುತ್ತೂರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಸ್ತೂರಿ ಬೊಳುವಾರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top