ಪುತ್ತೂರು: ಹುಲಿವೇಷ ತಂಡ ಕಟ್ಟು ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ ಅಕ್ಷಯ್ ಕಲ್ಲೇಗ ಅವರ ಹತ್ಯೆಯ ಹಿಂದೆ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಕುರಿತು ಪೊಲೀಸ್ ಇಲಾಖೆಯಿಂದ ಪತ್ತೆ ಹಚ್ಚುವ ಕಾರ್ಯ ಶೀಘ್ರ ಆಗಬೇಕು. ಜತೆಗೆ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡುವ ಕೆಲಸ ಸರಕಾರದಿಂದ ಆಗಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಸೋಮವಾರ ತಡರಾತ್ರಿ ನೆಹರೂನಗರದಲ್ಲಿ ಹತ್ಯೆಯಾದ ಅಕ್ಷಯ್ ಕಲ್ಲೇಗ ಅವರ ಪಾರ್ಥಿವ ಶರೀರದ ದರ್ಶನ ಮಾಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಹುಲಿ ಕುಣಿತಕ್ಕೆ ತನ್ನದೆ ಆದ ಛಾಪನ್ನು ಕೊಟ್ಟು ಎಲ್ಲಾ ಯುವಕರಿಗೆ ನಾಯಕತ್ವ ನೀಡಿ, ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ಕೊಟ್ಟ ಅಕ್ಷಯ ಕಲ್ಲೇಗ ಅವರ ಹತ್ಯೆಯಾಗಿದೆ. ಅವರ ಮರಣ ಈ ರೀತಿ ಆಗಲಿದೆ ಎಂದು ಯಾರೂ ಭಾವಿಸಿರಲಿಲ್ಲ. ಈ ಹತ್ಯೆಯ ಹಿಂದೆ ಯಾರ್ಯಾರು ಇದ್ದಾರೋ ಇದನ್ನು ಪತ್ತೆ ಹಚ್ಚುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕು ಎಂದ ಅವರು, ದ.ಕ ಜಿಲ್ಲೆಯಲ್ಲಿ ಲಾ ಆ್ಯಂಡ್ ಆರ್ಡರ್ ಕುಸಿದಿದೆ. ಎರಡು ತಿಂಗಳಲ್ಲಿ ಎರಡು ಮರ್ಡರ್ ಆಗಿದೆ. ಇದಕ್ಕೆ ಸರಕಾರ ಕಠಿಣ ಕ್ರಮ ಕೈಗೊಳ್ಳುವಲ್ಲಿ ರಾತ್ರಿ ಪೊಲೀಸ್ ಬೀಟ್ ಹೆಚ್ಚು ಪರಿಣಾಮಕಾರಿಯಾಗಿ ಮಾಡುವಲ್ಲಿ ಸರಕಾರ ಪರೋಕ್ಷವಾಗಿ ವೈಪಲ್ಯ ಆಗಿದೆ ಎಂದು ಆರೋಪಿಸಿದರು.