ಪುತ್ತೂರು: ಪುತ್ತೂರಿನ ಪ್ರಸಿದ್ಧ ಹುಲಿವೇಷ ತಂಡವಾದ ಕಲ್ಲೇಗ ಟೈಗಸ್೯ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ (24) ಅವರನ್ನು ಸೋಮವಾರ ತಡರಾತ್ರಿ ನೆಹರೂನಗರದಲ್ಲಿ ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನೆಹರೂ ನಗರದ ವಿವೇಕಾನಂದ ಕಾಲೇಜು ರಸ್ತೆಯಲ್ಲಿ ಮಧ್ಯರಾತ್ರಿ ತಂಡವೊಂದು ದಾಳಿ ಮಾಡಿ ಹತ್ಯೆ ಮಾಡಿದೆ. ಮಾತುಕತೆಗೆ ಬರಲು ಹೇಳಿ ದಾಳಿ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಕಾಲೇಜು ರಸ್ತೆಯಲ್ಲಿ ದಾಳಿ ಮಾಡುತ್ತಿದ್ದಂತೆ ಅಕ್ಷಯ್ ಅಲ್ಲಿಂದ ಓಡಿದ್ದು, ದುಷ್ಕರ್ಮಿಗಳ ತಂಡ ಬೆನ್ನಟ್ಟಿಕೊಂಡು ಹೋಗಿದೆ. ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಈ ಘಟನೆ ನಡೆದಿದೆ. ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಮಾರಕ ದಾಳಿಗೆ ತುತ್ತಾದ ಅಕ್ಷಯ್ ಹೆದ್ದಾರಿಯ ಇನ್ನೊಂದು ಭಾಗದ ಖಾಲಿ ಜಾಗದ ಪೊದೆಯ ಪಕ್ಕದಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿದರು. ಬಳಿಕ ಅಕ್ಷಯ್ ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ಸಾಗಸಿದ್ದಾರೆ ಎನ್ನಲಾಗಿದೆ.
ಹುಲಿವೇಷ ಪ್ರವೀಣ:
ನೆಹರೂನಗರ ಬಳಿಯ ನಿವಾಸಿ ಚಂದ್ರಶೇಖರ-ಕಮಲ ದಂಪತಿ ಪುತ್ರನಾದ ಅಕ್ಷಯ್ ಅವರು ಕಳೆದ ಆರು ವರ್ಷಗಳ ಹಿಂದೆ ಕಲ್ಲೇಗ ಟೈಗಸ್೯ ಎಂಬ ಹೆಸರಿನ ಹುಲಿವೇಷ ತಂಡ ರಚಿಸಿದ್ದರು. ನೆಹರೂ ನಗರದ ಪ್ರಸಿದ್ಧ ಕಲ್ಕುಡ ದೈವದ ಕ್ಷೇತ್ರದಲ್ಲಿ ಹುಲಿವೇಷ ತಂಡ ಕಟ್ಟಿದ್ದರು. ಈ ವರ್ಷದ ನವರಾತ್ರಿಯಲ್ಲೂ ಅಕ್ಟೋಬರ್ 18ರಿಂದ ಊದು ಪೂಜೆಯೊಂದಿಗೆ ಪುತ್ತೂರಿನ ನಾನಾ ಕಡೆ ಇವರ ತಂಡ ಪ್ರದರ್ಶನ ನೀಡಿತ್ತು. ಪುತ್ತೂರಿನಲ್ಲಿ ಅ. 22ರಂದು ನಡೆದ ಪಿಲಿರಂಗ್ ಮತ್ತು ಪಿಲಿಗೊಬ್ಬು ಎಂಬ ಎರಡು ಹುಲಿ ವೇಷ ಸ್ಪರ್ಧೆಗಳಲ್ಲೂ ಇವರ ತಂಡ ಪ್ರಶಸ್ತಿ ಗಳಿಸಿತ್ತು.
ಮೂವರ ತಂಡ ಅಕ್ಷಯ್ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ಇವರಲ್ಲಿ ಇಬ್ಬರು ಮುಂಜಾನೆ ಹೊತ್ತಿಗೆ ಪುತ್ತೂರು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ದುಡ್ಡಿನ ವಿಚಾರದಲ್ಲಿ ಪರಿಚಿತರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಅಪಘಾತವೊಂದರ ವಿಚಾರದಲ್ಲಿ ಪರಸ್ಪರ ಚರ್ಚೆ ನಡೆದಿದ್ದು, ಇದರ ಮುಂದುವರಿದ ಭಾಗವಾಗಿ ತಡರಾತ್ರಿ ಅಕ್ಷಯ್ ನನ್ನು ನೆಹರೂ ನಗರದ ಬಳಿ ಕರೆಸಿ ಕೊಲೆ ಮಾಡಲಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.