ಪುತ್ತೂರು: ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ನಡೆಯುವ ವಸ್ತ್ರ ವಿತರಣಾ ಕಾರ್ಯಕ್ರಮ ಹಾಗೂ ಸಹಭೋಜನ ಕಾರ್ಯಕ್ರಮದ ಅಂಗವಾಗಿ ಈ ಬಾರಿ 50 ಸಾವಿರ ಮಂದಿಗೆ ವಸ್ತವಿತರಣೆ ಮಾಡಲಾಗುವುದು. ಅದಕ್ಕಾಗಿ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದು ರೈ ರೈ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಅವರು ಸೋಮವಾರ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಬಾರಿ ವಸ್ತ್ರ ವಿತರಣೆ ಅಂಗವಾಗಿ ಮಹಿಳೆಯರಿಗೆ ಸೀರೆ ಹಾಗೂ ಪುರುಷರು ಮತ್ತು ಮಕ್ಕಳಿಗೆ ಬೆಡ್ ಶೀಟ್, ಲುಂಗಿ ವಿತರಿಸಲಾಗುವುದು. ಇದಕ್ಕಾಗಿ ಸಿದ್ಧತೆಗಳು ನಡೆದಿದೆ. ಒಟ್ಟು 15 ಕೌಂಟರ್ ಗಳನ್ನು ತೆರೆಯಲಾಗುವುದು. ಹಿರಿಯರು ಹಾಗೂ ವಿಕಲಚೇತನರಿಗೆ ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗುವುದು. ವಸ್ತ್ರ ವಿತರಣೆ ಸಂದರ್ಭದಲ್ಲಿ ವಸ್ತ್ರ ತೆಗೆದುಕೊಂಡವರ ಕೈ ಬೆರಳಿಗೆ ಚುನಾವಣೆಗೆ ಬಳಸುವ ಶಾಯಿಗಳನ್ನು ಹಾಕಲಾಗುವುದು. ಊಟೋಪಚಾರದ ವ್ಯವಸ್ಥೆಗೆ 20 ಕೌಂಟರ್ ಗಳನ್ನು ತೆರೆಯಲಾಗುವುದು. 120 ಜನರ ತಂಡ ಊಟ ತಯಾರಿಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ 20 ಮಂದಿ ಕಟ್ಟಕಡೆಯ ವ್ಯಕ್ತಿಗಳನ್ನು ಸನ್ಮಾನ ಮಾಡಲಾಗುವುದು. ಸಮಾಜದಲ್ಲಿ ಆಶಕ್ತರಿಗೆ ಸಹಾಯ ಹಸ್ತ ಚಾಚೂವುದು, ತಾನು ದುಡಿದು ತನ್ನ ಕುಟುಂಬವದವರ ಸೇವೆಯಲ್ಲಿ ತೊಡಗಿಕೊಂಡ 20 ಮಂದಿ ಬಡ ವರ್ಗದವರನ್ನು ಸನ್ಮಾನಿಸಲಾಗುವುದು. ಇದಕ್ಕಾಗಿ ಈಗಾಗಲೇ 60 ಮಂದಿ ಹೆಸರುಗಳು ನೋಂದಾವಣೆಯಾಗಿದ್ದು, 20 ಮಂದಿಯನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ಬಾರಿಯಂತೆ ಈ ಬಾರಿಯೂ ಗೂಡುದೀಪ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 10 ಸಾವಿರ, ದ್ವಿತೀಯ ಏಳೂವರೆ ಸಾವಿರ, ತೃತೀಯ 5 ಸಾವಿರ ಬಹುಮಾನ ನೀಡಲಾಗುವುದು. ಅಲ್ಲದೆ ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೇಟ್ ನೀಡಲಾಗುವುದು. ಸ್ಪರ್ಧಾಳುಗಳು ಕೈಯಿಂದಲೇ ರಚಿಸಿದ ಗೂಡುದೀಪವನ್ನು ಮನೆಯಲ್ಲಿ ಮಾಡಿಕೊಂಡು ಬರಬೇಕು. ಅದನ್ನು ಪ್ರದರ್ಶಿಸಲಾಗುವುದು.
ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ತನಕ ವಸ್ತ್ರ ವಿತರಣೆ ನಡೆಯಲಿದೆ. 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸೇರಿದಂತೆ ಹಲವು ಮಂದಿ ಪ್ರಮುಖರು, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಒಟ್ಟಾರೆ ಕಾರ್ಯಕ್ರಮದಲ್ಲಿ ಯಾವುದೇ ಪಕ್ಷ, ಧರ್ಮ, ಜಾತಿ ವಿಚಾರ ಇಲ್ಲ ಎಂದು ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ಸುಮಾರು 22 ಸಾವಿರ ಕುಟುಂಬಗಳಿಗೆ ಬೇರೆ ಬೇರೆ ರೀತಿಯಲ್ಲಿ ಟ್ರಸ್ಟ್ ವತಿಯಿಂದ ಸಹಾಯ ಮಾಡಲಾಗಿದೆ. ಅಲ್ಲದೆ ಕಾರ್ಮಿಕ ಕಾರ್ಡ್, ಆಧಾರ್ ಕಾರ್ಡ್ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಬೇರೆ ಬೇರೆ ರೀತಿಯ ತರಬೇತಿಗಳನ್ನು ಟ್ರಸ್ಟ್ ವತಿಯಿಂದ ನಡೆಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಮುಖ್ಯಸ್ಥೆ ಸುಮಾ ಅಶೋಕ್ ರೈ, ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಟ್ರಸ್ಟ್ ಮಾಧ್ಯಮ ವಕ್ತಾರ ಕೃಷ್ಣಪ್ರಸಾದ್ ಬೊಲ್ಲಾವು ಉಪಸ್ಥಿತರಿದ್ದರು.