ಸುಳ್ಯ: ತನ್ನ ವೃತ್ತಿ ಜೀವನದ ಬಿಝಿ ಶೆಡ್ಯೂಲ್ ಮಧ್ಯೆಯೂ ತನ್ನ ಆಸಕ್ತಿಯ ಕ್ರೀಡಾ ಕ್ಷೇತ್ರಕ್ಕೆ ಒಂದಿಷ್ಟು ಸಮಯವನ್ನು ಮೀಸಲಿಡುವ ಈ ಇಂಜಿನಿಯರ್ ಎರಡನೇ ಬಾರಿಯೂ ರಾಷ್ಟ್ರಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಸುಳ್ಯದ ಇಂಜಿನಿಯರ್ ಮಣಿಕಂಠನ್ ಸ್ಪೋರ್ಟ್ಸ್ ಇಂಜಿನಿಯರಿಂಗ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸುಳ್ಯ ಉಪವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಮಣಿಕಂಠನ್ ಬಾಲ್ಯದಿಂದಲೇ ಕ್ರೀಡಾಪಟು. ಸರಕಾರಿ ಹುದ್ದೆಯಲ್ಲಿದ್ದರೂ ತನ್ನ ಕ್ರೀಡಾ ಅಸಕ್ತಿಯನ್ನು ಮುಂದುವರಿಸುತ್ತಿರುವ
ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಜಾವೆಲಿನ್ ತ್ರೋದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿ ರಾಷ್ಟ್ರ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ತುಮಕೂರಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಮೊನ್ನೆ ತಾನೆ ನಡೆದ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ 46.42 ಮೀಟರ್ ಎಸೆದು ಪ್ರಥಮ ಸ್ಥಾನ ಪಡೆದಿದ್ದಾರೆ. 2022ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಮಣಿಕಂಠನ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಪುಣೆಯಲ್ಲಿ ನಡೆದ
ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಇದೀಗ ಸತತಎರಡನೇ ಬಾರಿ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಸುಳ್ಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ಇಂಜಿನಿಯರ್ ಆಗಿರುವ ಮಣಿಕಂಠನ್‌ರಿಗೆ ಕ್ರೀಡಾ ಕ್ಷೇತ್ರದಲ್ಲಿ ಬತ್ತದ ಆಸಕ್ತಿ ಇದೆ. ಮೂಲತಃ ಕ್ರೀಡಾಪಟು ಆಗಿದ್ದರೂ, ಕೆಲಸದ ಒತ್ತಡದ ಮಧ್ಯೆ ಅವರಿಗೆ ಕ್ರೀಡೆಯಲ್ಲಿ ಅಭ್ಯಾಸ ನಡೆಸಲು ಈಗ ಸಮಯ ಸಿಗುವುದೇ ಇಲ್ಲ. ಕೆಲಸದ ಒತ್ತಡದ ಮಧ್ಯೆ ಯಾವುದೇ ಅಭ್ಯಾಸ ಇಲ್ಲದೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲೆ ರಾಜ್ಯಮಟ್ಟದಲ್ಲಿ ಗೆಲುವು ಸಾಧಿಸುತ್ತಿರುವುದು ಮಣಿಕಂಠನ್ ಹೆಗ್ಗಳಿಕೆ.
ಬಾಲ್ಯದಿಂದಲೇ ಕ್ರೀಡಾಪಟು:
ತನ್ನ ಶಾಲಾ ಕಾಲೇಜು ದಿನಗಳಿಂದಲೇ ಕ್ರೀಡಾಪಟುವಾಗಿದ್ದರು. ಕ್ರಾಸ್ ಕಂಟ್ರಿ, 400 ಮೀಟರ್, 800 ಮೀಟರ್ ಓಟದಲ್ಲಿ ಭಾಗವಹಿಸಿ ನಿರಂತರ ಬಹುಮಾನಗಳನ್ನು ಪಡೆಯುತ್ತಿದ್ದರು.ಎಸ್‌ಡಿಎಂ ಉಜಿರೆಯಲ್ಲಿ ಪಿಯುಸಿ, ಕೆಪಿಟಿ ಮಂಗಳೂರಿನಲ್ಲಿ ಡಿಪ್ಲೊಮಾ ಹಾಗೂ ಹಾಸನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಅಧ್ಯಯನ ನಡೆಸುವ ಸಂದರ್ಭದಲ್ಲಿ ಜಾವೆಲಿನ್ ಎಸೆತದ ಜೊತೆಗೆ, 400, 800 ಮೀಟರ್ ಹಾಗೂ ಕ್ರಾಸ್ ಕಂಟ್ರಿಯಲ್ಲಿ ಪಾಲ್ಗೊಂಡಿದ್ದರು. ಇಂಜಿನಿಯರಿಂಗ್ ಅಧ್ಯಯನ ನಡೆಸುತ್ತಿದ್ದ ಸಂದರ್ಭದಲ್ಲಿ ನಾಗಪುರದಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಳಿಕ ಸರಕಾರಿ ಹುದ್ದೆಗೆ ಸೇರಿದ ಬಳಿಕ ಅಭ್ಯಾಸ ನಡೆಸಲು ಸಮಯ ಸಿಗುತ್ತಿಲ್ಲ. ಆದರೂ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ನಿರಂತರ ಭಾಗವಹಿಸುತ್ತಾರೆ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜಾವೆಲಿನ್ ಜೊತೆಗೆ 400 ಮೀಟರ್ ಹಾಗೂ 800 ಮೀಟರ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದರು.
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಮೂರಾಜೆಯ ತ್ಯಾಗಮೂರ್ತಿ ಹಾಗೂ ಪುಷ್ಪ ದಂಪತಿಯ ಪುತ್ರರಾದ ಮಣಿಕಂಠನ್ ಇದೀಗ ರಾಷ್ಟ್ರೀಯ ಮಟ್ಟದ ಜಾವೆಲಿನ್ ತ್ರೋದಲ್ಲಿ ಪದಕ ಪಡೆಯುವ ತವಕದಲ್ಲಿದ್ದಾರೆ.