ಪುತ್ತೂರು: ಪಡ್ನೂರು ಶ್ರೀ ಜನಾರ್ದನ ಯುವಕ ಮಂಡಲದ ಸುವರ್ಣ ಮಹೋತ್ಸವ ‘ಪಡ್ನೂರು ಉತ್ಸವ’ದ ಅಂಗವಾಗಿ 58 ಕೆ.ಜಿ. ವಿಭಾಗದ ಮ್ಯಾಟ್ ಅಂಕಣ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ಭಾನುವಾರ ಪಡ್ನೂರು ಶಾಲಾ ವಠಾರದ ಶ್ರೀ ಜನಾರ್ದನ ವೇದಿಕೆಯಲ್ಲಿ ನಡೆಯಿತು.
ನಿವೃತ್ತ ಕ್ರೀಡಾಧಿಕಾರಿ ಮಾಧವ ಬಿ.ಕೆ. ದೀಪ ಬೆಳಗಿಸಿ ಉದ್ಘಾಟಿಸಿ, ಪ್ರಸ್ತುತ ಸಂಸ್ಕೃತಿ, ಸಂಸ್ಕಾರ ಉಳಿಸುವ ಕಾರ್ಯ ಯುವಜನ ಮೇಳಗಳಿಂದ ನಡೆಯುತ್ತಿದ್ದು, ತಾಲೂಕು ಮಟ್ಟದ ಯುವಜನ ಮೇಳವನ್ನು ರದ್ದುಗೊಳಿಸಿದ ಪರಿಣಾಮ ಯುವಕರಿಗೆ ಅವಕಾಶ ಕಡಿಮೆಯಾಗಿದೆ. ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಹೆಸರುವಾಸಿಯಾದ ಪಡ್ನೂರು ಶ್ರೀ ಜನಾರ್ದನ ಯುವಕ ಮಂಡಲ ಮಣ್ಣಿನ ಕ್ರೀಡೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಬಡ್ಡಿ ಆಟಗಾರ ಕಿಶೋರ್ ಬೊಟ್ಯಾಡಿ ಮಾತನಾಡಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಪಡ್ನೂರು ಜನಾರ್ದನ ಯುವಕ ಮಂಡಲ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ಕಾರ್ಯವನ್ನು ಈ ವೇದಿಕೆಯಲ್ಲಿ ಮಾಡಿದೆ. ಜತೆಗೆ ಸದ್ವಿಚಾರಗಳನ್ನು ಅಳವಡಿಸಿಕೊಂಡು ಮಣ್ಣಿನ ಕ್ರೀಡೆ ಕಬಡ್ಡಿ ಪಂದ್ಯಾಟ ಏರ್ಪಡಿಸುವ ಮೂಲಕ ಮಾದರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬನ್ನೂರು ಗ್ರಾಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್, ಮಾಜಿ ಅಧ್ಯಕ್ಷೆ ರಮಣಿ ಡಿ. ಗಾಣಿಗ, ಸದಸ್ಯರಾದ ಗಿರಿಧರ ಪಂಜಿಗುಡ್ಡೆ, ವಿಮಲ, ಶ್ರೀನಿವಾಸ ಪೆರ್ವೋಡಿ, ಗಣೇಶ್ ಪಳ್ಳ, ಯುವಕ ಮಂಡಲ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಮೂವಪ್ಪು, ಹಿರಿಯ ಕಬಡ್ಡಿ ಆಟಗಾರರಾದ ಮಾಂಕು ಮುಂಡಾಜೆ, ಗಿರಿಯಪ್ಪ ರೆಂಜಾಳ, ತಿಮ್ಮಪ್ಪ ಪೂಜಾರಿ ಶುಭ ಹಾರೈಸಿದರು.
ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ದೇಂತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜಗದೀಶ್ ಆಟಿಕ್ಕು ವಂದಿಸಿದರು. ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಆಟಿಕ್ಕು ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಪಡ್ನೂರು ಶ್ರೀ ಜನಾರ್ದನ ಯುವಕ ಮಂಡಲ ಹಾಗೂ ಶ್ರೀ ಸರಸ್ವತಿ ಯುವತಿ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.