ಪುತ್ತೂರು: ಕೊಳ್ತಿಗೆ ಗ್ರಾಮದ ಪಾಲ್ತಾಡು ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ 2024 ಫೆ.17 ರಿಂದ 24 ರತನಕ ನಡೆಯಲಿದ್ದು ಭಕ್ತಾದಿಗಳ ಸಭೆ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು.
ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಅಶೋಕ್ ರೈ ಅವರನ್ನು ಭಕ್ತರ ಸಮ್ಮುಖದಲ್ಲಿ ನೇಮಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಗೌರವಾಧ್ಯಕ್ಷರಾಗಿ ಆಯ್ಕೆಯಾದದ್ದು ನನ್ನ ಯೋಗ. ಕೇವಲ ದುಡ್ಡಿನಿಂದ ಬ್ರಹ್ಮಕಲಶೋತ್ಸವ ನಡೆಯಲು ಸಾಧ್ಯವಿಲ್ಲ. ಭಕ್ತಿ, ಶ್ರದ್ಧೆ, ನಂಬಿಕೆಯಿಂದ ಎಲ್ಲರೂ ಒಟ್ಟಾಗಿ ತೊಡಗಿಸಿಕೊಂಡರೆ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಊರಿನ ಅಭಿವೃದ್ಧಿಗೆ ಆ ಗ್ರಾಮದ ದೇವಸ್ಥಾನಕ್ಕೆ ಬ್ರಹ್ಮಕಲಶೋತ್ಸವ ಆಗಬೇಕು. ಈ ನಿಟ್ಟಿನಲ್ಲಿ ಬೇರೆ ಬೇರೆ ಸಮಿತಿಯವರು ತಮ್ಮ ಜವಾಬ್ದಾರಿಯನ್ನು ಕರ್ತವ್ಯ ನಿಷ್ಠೆ ಪ್ರಾಮಾಣಿಕತೆಯಿಂದ ಮಾಡಬೇಕಾಗಿದೆ. ಬ್ರಹ್ಮಕಲಶೋತ್ಸವದಲ್ಲಿ ಸಾಧ್ಯವಾದಷ್ಟು ಸಹಕಾರ ನೀಡಲಿದ್ದೇನೆ ಎಂದರು.
ವೇದಿಕೆಯಲ್ಲಿ ಮೊಕ್ತೇಸರರಾದ ಚಂದ್ರಶೇಖರ ರೈ, ನಾರಾಯಣ ರೈ, ಸಂಜೀವ ಗೌಡ, ಉಳ್ಳಾಕುಲು ದೈವಸ್ಥಾನ ಆಡಳಿತ ಸಮಿತಿ ಅಧ್ಯಕ್ಷರು, ನಳೀಲು ದೇವಸ್ಥಾನದ ಕಾರ್ಯದರ್ಶಿ ಅರುಣ್ ಉಪಸ್ಥಿತರಿದ್ದರು. ಸಭೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು. ಶಶಿಕುಮಾರ್ ಬಿ ಎನ್. ಕಾರ್ಯಕ್ರಮ ನಿರೂಪಿಸಿದರು.
























