ವಿರಾಜಪೇಟೆ: ರಕ್ಷಿತಾರಣ್ಯದಿಂದ ಬೇಟೆಯಾಡಿ ಎರಡು ಜಿಂಕೆಗಳನ್ನು ಕೊಂದು ಮಾಂಸ ಮಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ಪೊಲೀಸ್ ಅರಣ್ಯ ಸಂಚಾರಿ ದಳದವರು ಯಶಸ್ವಿಯಾಗಿದ್ದು, ಬಂಧಿತರಿಂದ ಮಾಂಶ ವಶಪಡಿಸಿಕೊಂಡಿದ್ದಾರೆ.
ಬೇಟೋಳಿ ಗ್ರಾಮದ ನಿವಾಸಿ ವಿರಾಜಪೇಟೆ ಬೇಕರಿಯೊಂದರ ಮಾಲೀಕ ಎಂ.ಎಂ ಅಜೀಜ್ (45), ನೆಹರು ನಗರ ನಿವಾಸಿ ಆಟೋ ಚಾಲಕ ಹುಸೈನ್ ಸಿ.ಎ.ಅಲಿಯಾಸ್ ಜಂಶೀರ್ (32) ಬಂಧಿತ ಆರೋಪಿಗಳು.
ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕ ಎಂ.ಸಿ.ಮುತ್ತಣ್ಣ ಅವರಿಗೆ ದೊರೆತ ಖಚಿತ ಮಾಹಿತಿ ಮೇಲೆ ಪೆರುಂಬಾಡಿ ಕಡೆಯಿಂದ ಬಿಟ್ಟಂಗಾಲದತ್ತ ಸಾಗುತ್ತಿದ್ದ ಇನೋವಾ ಕಾರನ್ನು ವಿರಾಜಪೇಟೆ ಪೊಲೀಸ್ ಅರಣ್ಯ ಸಂಚಾರಿ ದಳದವರು ಹೆಗ್ಗಳ ಗ್ರಾಮದಲ್ಲಿ ತಡೆದು ನಿಲ್ಲಿಸಿ ತಪಾಸಣೆ ಮಾಡಿದ್ದಾರೆ. ದಾಳಿಯ ಸಂದರ್ಭ ಕಾರಿನಲ್ಲಿ ಎರಡು ಜಿಂಕೆಗಳ ಒಟ್ಟು 44 ಕೆ.ಜಿ. ಮಾಂಸ ಮತ್ತು ಜಿಂಕೆಗಳ ಎರಡು ತಲೆಗಳನ್ನು ಪತ್ತೆಯಾಗಿದೆ.
ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳಾದ ಚಾಮಿಯಾಲ ಮೈತಾಡಿಯ ಅಜೀಜ್ (ಅಜ್ಜು), ಬೇಟೋಳಿ ಗುಂಡಿಗೆರೆಯ ಅಶ್ರಫ್, ಅಲಿಯಾಸ್ ಅಚ್ಚು ಮತ್ತು ಶಿಯಾಬ್ ಎಂಬುವವರು ತಲೆಮರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಳಸಿದ ಒಂದು ಒಂಟಿ ನಳಿಕೆ ಕೋವಿ, ಎರಡು ಕತ್ತಿ, ಮೂರು ಚೂರಿ, ಇನೋವಾ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ತಿದ್ದುಪಡಿ ಕಾಯ್ದೆ 2023ರ 1,3,25 ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯ ಅನ್ವಯ ಮೊಕದ್ದಮೆ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಮೂವರು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.