ರೈಲ್ವೇ ಖಾಸಗೀಕರಣ ವಿರುದ್ಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಪುತ್ತೂರು: ದೇಶದ ಆರ್ಥಿಕತೆಯ ಜೀವಾಳ, ಜನರ ಜೀವನಾಡಿ ರೈಲ್ವೇ ಖಾಸಗೀಕರಣದ ವಿರುದ್ಧ ದೇಶದಾದ್ಯಂತ ಎಲ್ಲಾ ರೈಲ್ವೇ ನಿಲ್ದಾಣಗಳ ಎದುರು ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್, ದ.ಕ.ಜಿಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ, ವಿವಿಧ ರೈತ ಸಂಘಟನೆಗಳ ಒಕ್ಕೂಟ ಹಾಗೂ ವಿದ್ಯಾರ್ಥಿ ಯುವಜನ ಮಹಿಳಾ ದಲಿತ ಆದಿವಾಸಿ ಹಾಗೂ ಜನಪರ ಸಂಘಟನೆಗಳ ವೇದಿಕೆ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ಸಭೆ ಶುಕ್ರವಾರ ಪುತ್ತೂರಿನ ರೈಲ್ವೇ ನಿಲ್ದಾಣದ ಮುಂಭಾಗ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಬಿಜೆಪಿಯ ದುರಾಡಳಿತವನ್ನು ಸಹಿಸಿ ದೇಶದ ಪ್ರಮುಖ ರೈಲ್ವೇ, ವಿದ್ಯುತ್, ವಿಮಾನ ನಿಲ್ದಾಣದ ಮುಂತಾದ ಎಲ್ಲಾ ಕ್ಷೇತ್ರಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ  ಆಡಳಿತ ಮಾಡಲು ಅಸಮರ್ಥರಾಗಿರುವುದನ್ನು ತೋರಿಸಿಕೊಟ್ಟಿದೆ. ಸಾಮಾನ್ಯ ಜನರ ಭಾವನೆಯನ್ನೇ ಅರ್ಥ ಮಾಡಿಕೊಳ್ಳದ ಕೇಂದ್ರ ಸರಕಾರದ ವಿರುದ್ಧ ಮುಂದಿನ ಚುನಾವಣೆಯಲ್ಲಿ ಜನತೆ ಉತ್ತರ ನೀಡಲಿದ್ದಾರೆ. ಎಲ್ಲವನ್ನೂ ಖಾಸಗಿಕರಣಗೊಳಿಸಿದರೆ ಕೇಂದ್ರ ಸರಕಾರಕ್ಕೆ ಮಂತ್ರಿಗಳ ಅವಶ್ಯಕತೆಯಿದೆಯೇ ಎಂದು ಪ್ರಶ್ನಿಸಿದ ಅವರು, ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಕೇಂದ್ರ ಸರಕಾರದ ಸಾಧನೆ ಎಲ್ಲವನ್ನೂ ಖಾಸಗಿಕರಣ ಮಾಡಿರುವುದೇ ಸಾಧನೆ. ಜನರು ಬದುಕಲು ಯಾವುದೇ ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ಇದುವರೆಗೆ ಹಮ್ಮಿಕೊಂಡಿಲ್ಲ. ಇದರಿಂದ ತಿಳಿಯುತ್ತದೆ ಕೇಂದ್ರ ಸರಕಾರ  ಆಡಳಿತ ಮಾಡಲು ನಾಲಾಯಕು. ಇದರ ವಿರುದ್ಧ ಎಲ್ಲರೂ ಮಾತನಾಡ ಬೇಕಾಗಿದೆ ಎಂದ ಅವರು, ಮುಂದಿನ ಚುನಾವಣೆಯಲ್ಲಿ ಧರ್ಮ ಧರ್ಮಗಳ ಮಧ್ಯೆ ಕಂದಕ ತರುವ ಕೆಲಸ ಮಾಡುವುದೇ ಬಿಜೆಪಿಯ ಅಜೆಂಡಾ ಎಂದರು.

ಸಿಐಟಿಯು ಮುಖಂಡ, ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ, ದೇಶದ ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಪ್ರಧಾನಿ ನರೇಂದ್ರ ಮೋದಿ ಮಹಾಮುರುಕ. ನಮ್ಮೆಲ್ಲರ ತೆರಿಗೆ ಹಣದಿಂದ ವಿದ್ಯುತ್, ರೈಲ್ವೇ, ವಿಮಾನ ನಿಲ್ದಾಣ ನಿರ್ಮಾಣವಾಗಿ ಬೆಳೆದಿದೆ. ನಮ್ಮನ್ನು ಧರ್ಮ ಧರ್ಮದ ನಡುವೆ ಎತ್ತಿಕಟ್ಟುವ ಸರಕಾರ, ಕಾರ್ಮಿಕರ ಪರವಾಗಿ ನಾವಿದ್ದೇವೆ ಎಂದು ಹೇಳುತ್ತಿದ್ದರೂ ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಐಷರಾಮಿ ರೈಲ್ವೇ ನಿಲ್ದಾಣ ಮಾಡುವುದಕ್ಕೋಸ್ಕರ ಖಾಸಗಿಕರಣ ಮಾಡಲು ಹೊರಟಿದ್ದಾರೆ. ರೈಲ್ವೇ ಅಧಿಕಾರಿಗಳನ್ನು ಕುಳಗಳನ್ನಾಗಿ ಮಾಡುವ ಮೂಲಕ ತಮಗೆ ಬೇಕಾದಂತೆ ಬಳಸಲಾಗುತ್ತಿದೆ. ಕೊಟ್ಟ ಮಾತನ್ನು ಈಡೇರಿಸಲಾಗದ ಸರಕಾರ ಯಾವತ್ತೂ ಕೂಡಾ ಆಡಳಿತ ಮಾಡಲು ಯೋಗ್ಯರಲ್ಲ ಎಂದು ತಿಳಿಸಿದರು.































 
 

ಪ್ರತಿಭಟನೆಯನ್ನು ಸಿಪಿಐಎಂ ಮುಖಂಡ, ಹಿರಿಯ ನ್ಯಾಯವಾದಿ ಪಿ.ಕೆ.ಸತೀಶನ್ ಉದ್ಘಾಟಿಸಿದರು. ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಪುರಸಭೆ ಮಾಜಿ ಸದಸ್ಯ ಜಗನ್ನಾಥ ರೈ ಸೂತ್ರಬೆಟ್ಟು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಅಲ್ಪಸಂಖ್ಯಾತ ಘಟಕದ ಶಕೂರ್ ಹಾಜಿ, ಮುಖಂಡರಾದ ಅಬ್ದಲ್ ಖಾದರ್ ಮೇರ್ಲ, ಫಾರೂಕ್ ಬಾಯಂಬಾಡಿ, ಇಸಾಕ್ ಸಾಲ್ಮರ, ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top