ಪುತ್ತೂರು: ಕರ್ನಾಟಕ ಮರು ನಾಮಕರಣಗೊಂಡು 50ನೇ ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕನ್ನಡ ಭುವನೇಶ್ವರಿ ಮೆರವಣಿಗೆಯೊಂದಿಗೆ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಬುಧವಾರ ಆಚರಿಸಲಾಯಿತು.

‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಕನ್ನಡ ಭುವನೇಶ್ವರಿ ಮೆರವಣಿಗೆಗೆ ಶಾಸಕ ಅಶೋಕ್ ಕುಮಾರ್ ರೈ ದರ್ಬೆ ವೃತ್ತದ ಬಳಿ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು. ಬಳಿಕ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗಿ ಕೊರ್ಟ್ ರಸ್ತೆ ಮೂಲಕ ಪುರಭವನಕ್ಕೆ ತೆರಳಿತು. ಕಿಲ್ಲೆ ಮೈದಾನದಲ್ಲಿರುವ ಮಂಗಲ್ ಪಾಂಡೆ ಚೌಕಿಯಲ್ಲಿ ಸಹಾಯಕ ಕಮೀಷನರ್ ಗಿರೀಶ್ ನಂದನ್ ರಾಷ್ಟ್ರ ಧ್ವಜಾರೋಹಣ ಮಾಡಿದರು. ಶಾಸಕ ಅಶೋಕ್ ಕುಮಾರ್ ರೈ ಕನ್ನಡ ಧ್ವಜಾರೋಹಣ ಮಾಡಿದರು.

ಬಳಿಕ ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ 10 ಮಂದಿ ವಿವಿಧ ಕ್ಷೇತ್ರದ ಸಾಧಕರಾದ ಹಿರಿಯ ಪ್ರಸೂತಿ ತಜ್ಞ ಡಾ.ಸುಬ್ರಾಯ ಭಟ್ (ವೈದ್ಯಕೀಯ), ಎ.ಪಿ.ನಾರಾಯಣ ಮರಿಕೆ (ಕೃಷಿ), ನಿರ್ಮಲಾ ಸುರತ್ಕಲ್ (ಸಾಹಿತ್ಯ), ನಾರಾಯಣ ಕೆ. (ಶಿಕ್ಷಣ), ದಯಾನಂದ ರೈ ಕೋರ್ಮಂಡ (ಕ್ರೀಡೆ), ಸುಂದರ ರೈ ಮಂದಾರ (ರಂಗಭೂಮಿ), ರೆ.ವಿಜಯ ಹಾರ್ವಿನ್ (ಶಿಕ್ಷಣ ಸಮನ್ವಯ), ಡಾ.ಅಜಯ್ (ಸಮಾಜ ಸೇವೆ), ನಾರಾಯಣ ಕುಂಬ್ರ (ಸಾಹಿತ್ಯ ಸಂಘಟನೆ), ಸಿದ್ದಿಕ್ ನಿರಾಜೆ (ಪತ್ರಿಕೋದ್ಯಮ) ಅವರನ್ನು ಕನ್ನಡ ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಕನ್ನಡಕ್ಕಾಗಿ ನೀಡಿದ ಪೂರ್ವಜರ ಕೊಡುಗೆ ಅಪಾರವಾಗಿದ್ದು, ಅದನ್ನು ನೆನಪಿಸುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ ರಾಜ್ಯೋತ್ಸವದ ಮೂಲಕ ಕನ್ನಡ ಭಾಷೆಯ ಅಭಿಮಾನ, ಪ್ರೀತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದರು.

ವೇದಿಕೆಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರ್ ಶಿವಶಂಕರ ಜೆ., ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ಉಪಸ್ಥಿತರಿದ್ದರು.
ಪವಿತ್ರಾ ರೂಪೇಶ್, ಸುಚಿತ್ರಾ ಹೊಳ್ಳ ಮತ್ತು ಬಳಗದವರು ಐದು ಕನ್ನಡದ ಹಾಡುಗಳನ್ನು ಪ್ರಸ್ತುತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಸ್ವಾಗತಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.