ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿದ್ದ ವಿನಾಯಕ ಎಂಬ ಆನೆ ಮಂಗಳವಾರ ಸಾವನ್ನಪ್ಪಿದೆ.
ಆನೆಗಳಿಗೆ ತರಬೇತಿ ನೀಡುತ್ತಿದ್ದ ಸಂದರ್ಭದಲ್ಲಿ ದಿಢೀರ್ ಆಗಿ ಅಸ್ವಸ್ಥಗೊಂಡು ಕುಸಿದು ಬಿದ್ದು ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಯ ಬಳಿಕ ನಿಖರ ಕಾರಣಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಆನೆಗೆ ಅಕ್ಕಿರಾಜ, ವಿನಾಯಗನ್ ಎಂಬ ಹೆಸರು ಇದೆ. ಕೊಯಮತ್ತೂರಿನಲ್ಲಿ 2021ರಲ್ಲಿ ಈ ಆನೆಯನ್ನು ಸೆರೆ ಹಿಡಿದು ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡಲಾಗಿತ್ತು.
ಆನೆಯು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಯೆಲಚೆಟ್ಟಿ ಗ್ರಾಮದ ಸುತ್ತಮುತ್ತಲು ದೀರ್ಘ ಸಮಯದಿಂದ ಬೀಡು ಬಿಟ್ಟು ಮನೆಗಳ ಮೇಲೆ ದಾಳಿ ಮಾಡುತ್ತಿತ್ತು. ಈ ವರ್ಷದ ಜೂನ್ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಆನೆಯನ್ನು ಸೆರೆಹಿಡಿದು, ರಾಂಪುರ ಆನೆ ಶಿಬಿರದಲ್ಲಿ ಬಿಡಲಾಗಿತ್ತು. ಇಲ್ಲಿ ಅದಕ್ಕೆ ಕರ್ಣ ಎಂದು ಹೆಸರಿಡಲಾಗಿತ್ತು. ಆರೋಗ್ಯವಾಗಿದ್ದ ಆನೆ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದೆ. ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ ಎಂದು ಹೆಡೆಯಾಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್ ತಿಳಿಸಿದ್ದಾರೆ.
























