ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಅನಾಥ ಕಾರು ಪತ್ತೆ | ಆತ್ಮಹತ್ಯೆಗೈದ ಚಿಕ್ಕಮಗಳೂರಿನ ಉದ್ಯಮಿ!!

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 67ರ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಅನಾಥ ಕಾರೊಂದು ಇಂದು ಪತ್ತೆಯಾದ ಬೆನ್ನಲ್ಲೇ ಪರಿಶೀಲನೆ ನಡೆಸಿದಾಗ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಚಿಕ್ಕಮಗಳೂರಿನ ಗೋಕುಲ್ ಫಾರ್ಮ್‌ ನಿವಾಸಿ ಪ್ರಸನ್ನ (37) ಆತ್ಮಹತ್ಯೆ ಮಾಡಿಕೊಂಡವರು. ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುವ ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ 3 ವರ್ಷಗಳಿಂದ ಆತ್ಮಹತ್ಯೆಗಳಿಂದ ನಿರಾತಂಕವಾಗಿದ್ದ ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಮೂರು ವರ್ಷಗಳ ಬಳಿಕ ಆತ್ಮಹತ್ಯೆ ಪ್ರಕರಣ ವರದಿಯಾಗಿದೆ. 2019ರಲ್ಲಿ ಕಾಫಿ ಡೇ ಮಾಲೀಕ ಸಿದ್ದಾರ್ಥ ಆತ್ಮಹತ್ಯೆ ನಂತರ ಈ ಸೇತುವೆಯಲ್ಲಿ ಸರಣಿ ಆತ್ಮಹತ್ಯೆಗಳಾಗಿತ್ತು. ಹೀಗಾಗಿ 2020 ರಲ್ಲಿ ಆತ್ಮಹತ್ಯೆ ತಡೆಗಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ತಡೆಬೇಲಿಯನ್ನು ಅಳವಡಿಸಿತ್ತು. ಬಳಿಕ ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯೆಗಳು ನಿಂತಿದ್ದವು. ಆದರೆ, ಇದೀಗ ಮೂರು ವರ್ಷಗಳ ಬಳಿಕ ಮತ್ತೆ ಆತ್ಮಹತ್ಯೆ ಮೂಲಕ ನೇತ್ರಾವತಿ ಸೇತುವೆ ಸುದ್ದಿಯಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೈದ ವ್ಯಕ್ತಿಗಾಗಿ ಶೋಧ ಕಾರ್ಯ ಆರಂಭಗೊಂಡಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top