ಪುತ್ತೂರು: ನಗರದ ಸಮಸ್ಯೆಯೊಂದರ ಕುರಿತು ‘ನ್ಯೂಸ್ ಪುತ್ತೂರು’ ಜನಮನದ ಪ್ರತಿಧ್ವನಿ ಪ್ರಕಟಿಸಿದ ವರದಿಗೆ ಪುತ್ತೂರು ನಗರಸಭೆ ಸ್ಪಂದನೆ ನೀಡಿದೆ.

‘ಏಳ್ಮುಡಿ ಸೇತುವೆ ದಾಟಲು ಏಳು ಮುಡಿ ಹೊತ್ತ ಅನುಭವ!!’ ಎಂಬ ತಲೆಬರಹದಡಿ ವರದಿಯೊಂದನ್ನು ನ್ಯೂಸ್ ಪುತ್ತೂರು ವರದಿ ಪ್ರಕಟಿಸಿತ್ತು. ಇದೀಗ ವರದಿಗೆ ಸ್ಪಂದಿಸಿದ ನಗರಸಭೆ ಗಿಡಗಂಟಿಗಳ ತೆರವು ಕಾರ್ಯ ಕೈಗೊಂಡಿದೆ.
ಬಸ್ ನಿಲ್ದಾಣ – ದರ್ಬೆ ಸಂಪರ್ಕ ರಸ್ತೆಯ ಮಧ್ಯ ಭಾಗದ ಏಳ್ಮುಡಿ ಸೇತುವೆಯ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ಪಾದಚಾರಿಗಳು ನಡೆದಾಡಲು ಹರಸಾಹಸ ಪಡುವಂತಾಗಿತ್ತು. ಈ ಸೇತುವೆ ಮೊದಲೇ ಇಕ್ಕಟಾದ ಸೇತುವೆ. ವಾಹನಗಳು ಅತ್ತಿಂದಿತ್ತ ಚಲಿಸುವ ಸಂದರ್ಭ ಪಾದಚಾರಿಗಳು ಸೇತುವೆಯ ಬದಿಗಳಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ. ಗಿಡಗಂಟಿಗಳು ಬೆಳೆದ ಪರಿಣಾಮ ಸಮಸ್ಯೆ ಉಂಟಾಗಿದೆ.
ತಕ್ಷಣ ನಗರಸಭೆ ಎಚ್ಚೆತ್ತುಕೊಂಡು ಗಿಡಗಂಟಿಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ನಡೆದಾಡಲು ಸುಗಮವಾಗುವಂತೆ ಮಾಡಬೇಕಾಗಿದೆ ಎಂಬ ವರದಿ ಪ್ರಕಟವಾಗಿತ್ತು.