ಪುತ್ತೂರು: ಪುತ್ತೂರಿನ ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೃಹತ್ ನಡಿಗೆ ಜಾಥಾ ಸೋಮವಾರ ಆಯೋಜಿಸಲಾಯಿತು.
ಸಂತ ಫಿಲೋಮಿನಾ ಕಾಲೇಜು ಪ್ರಾಂಗಣದಲ್ಲಿ ಕಾರ್ಯಕ್ರಮ ರೂವಾರಿ, ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅತಿ ವಂದನೀಯ ಲಾರೆನ್ಸ್ ಮಸ್ಕರೇಞಸ್ ಚಾಲನೆ ನೀಡಿ, ಮಾದಕ ದ್ರವ್ಯ ಸೇವನೆಯ ವಿದುದ್ಧ ಹೋರಾಡಲು ಪ್ರತಿಜ್ಞಾವಿಧಿ ಬೋಧಿಸಿದರು.
ಬಳಿಕ ನಡಿಗೆ ಜಾಥಾ ಮುಖ್ಯ ರಸ್ತೆಯಲ್ಲಿ ಸಾಗಿ ಮಹಮ್ಮಾಯಿ ದೇವಸ್ಥಾನ ರಸ್ತೆಯ ಮೂಲಕ ಸಂಚರಿಸಿ ಪುತ್ತೂರು ಪೋಲೀಸ್ ಠಾಣೆಯ ಬಳಿ ಪುನಃ ಮುಖ್ಯರಸ್ತೆಯನ್ನು ಸೇರಿ ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ ಸಂಪನ್ನಗೊಂಡಿತು.
ಪುತ್ತೂರಿನ ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳಾದ ಸಂತ ಫಿಲೋಮಿನಾ ಕಾಲೇಜು, ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು, ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆ, ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ಬೆಥನಿ ಪ್ರೌಢಶಾಲೆ, ಬೆಥನಿ ಆಂಗ್ಲ ಮಾಧ್ಯಮ ಶಾಲೆ, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಗಳ ಸುಮಾರು 6000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿವರ್ಗ ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಪುತ್ತೂರು ಪೋಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ರಸ್ತೆಯುದ್ದಕ್ಕೂ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಪುತ್ತೂರರು ಡಿವೈಎಸ್ಪಿ ಡಾ| ಗಾನಾ ಪಿ ಕುಮಾರ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಮಾದಕ ದ್ರವ್ಯಸೇವನೆಯ ವಿರುದ್ಧ ಜನಜಾಗೃತಿ ಮೂಡಿಸಲು ಹಮ್ಮಿಕೊಂಡ ಕಾರ್ಯಕ್ರಮ ಪ್ರಶಂಸನೀಯ. ಮಾದಕದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಯುವಜನತೆಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಅಗತ್ಯ. ಮಾದಕ ವ್ಯಸನವು ನಮ್ಮ ಸಮಾಜವನ್ನು ಕಾಡುವ ಅತಿ ದೊಡ್ಡ ಸಮಸ್ಯೆ. ನಾವು ದಿನ ನಿತ್ಯ ಸೇವಿಸುವ ಚಾ, ಕಾಫಿ ಮುಂತಾದ ಪಾನೀಯಗಳಲ್ಲಿ ವೈದ್ಯರು ನಮಗೆ ನೀಡುವ ನೋವು ನಿವಾರಕ ಔ಼ಧಿಗಳಲ್ಲಿ ಸ್ವಲ್ಪಪ್ರಮಾಣದಲ್ಲಿ ಮಾದಕ ವಸ್ತುಗಳು ಸೇರಿವೆ. ಅವುಗಳನ್ನು ಮಿತಿಮೀರಿ ಸೇವಿಸುವುದು, ವೈದ್ಯರು ಹೇಳಿದ ಅವಧಿಗಿಂತಲೂ ಜಾಸ್ತಿ ಸೇವಿಸುವುದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ, ಮಾದಕ ದ್ರವ್ಯಗಳ ಸೇವನೆ, ಮಾರಾಟ ಎಲ್ಲವೂ ಶಿಕ್ಷಾರ್ಹ ಅಪರಾಧಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ರಾಮಾಂಜಿ ರಚಿಸಿ ನಿರ್ದೇಶಿಸಿದ ʼಮಾದಕ-ಮಾರಕʼ ಎಂಬ ಬೀದಿ ನಾಟಕವನ್ನು ಸಂತ ಫಿಲೋಮಿನಾ ಕಾಲೇಜಿನ ಪ್ರದರ್ಶನಕಲಾ ಘಟಕದ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ ಕೋಸ್ಟ, ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಪ್ರಾಂಶುಪಾಲರಾದ ವಂ|ಡಾ| ಆಂಟೊನಿ ಪ್ರಕಾಶ್ ಮೊಂತೆರೋ, ಸಂ ವಂ| ಅಶೋಕ್ ರಯಾನ್ ಕ್ರಾಸ್ತಾ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ವಂ|ಮಾಕ್ಸಿಮ್ ಡಿಸೋಜ, ರೋಸಲಿನ್ ಲೋಬೋ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಹ್ಯಾರಿ ಡಿಸೋಜ, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯ ಶಿಕ್ಷಕರಾ ಜಾನೆಟ್ ಡಿಸೋಜ, ಸಿಸ್ಟರ್ ಲೋರಾ ಪಾಯಸ್, ಸಿಸ್ಟರ್ ವಿನೀಶಾ, ಸಿಸ್ಟರ್ ಸೆಲಿನ್ ಪೆತ್ರಾ, ಸಿಸ್ಟರ್ ಶಾಂತಿ ಆಗ್ನೆಸ್, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ರಕ್ಷಕ ಸಂಘಗಳ ಆಧ್ಯಕ್ಷರು ಮತ್ತು ಪದಾಧಿಕಾರಿಗಳು, ಹಾಗೂ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದರು.