ಉಪ್ಪಿನಂಗಡಿ : ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುತ್ತಿರುವ ವೇಳೆ ಕುಡಿಯುವ ನೀರಿನ ಪೈಪುಗಳನ್ನು ಹಾನಿಗೊಳಿಸಿದ ಪರಿಣಾಮ ಕಳೆದ ನಾಲ್ಕು ದಿನಗಳಿಂದ ನೀರಿಲ್ಲದೆ ಸಂಕಷ್ಠಗೀಡಾದವರು ಆಕ್ರೋಶಗೊಂಡು ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆದಿದೆ.
ಉಪ್ಪಿನಂಗಡಿಯ ಕುಡಿಯುವ ನೀರು ಶುದ್ದೀಕರಣ ಘಟಕದಿಂದ ಹಲವೆಡೆಗೆ ಸರಬರಾಜಾಗುವ ನೀರಿನ ಪೈಪುಗಳು ಕಾಮಗಾರಿಯ ವೇಳೆ ಒಡೆದು ಹೋಗಿತ್ತು. ಪೈಪ್ ಸರಿಪಡಿಸಬೇಕೆಂದು ಪಂಚಾಯಿತಿ ಆಡಳಿತ ಕಾಮಗಾರಿ ನಿರತ ಸಂಸ್ಥೆಯ ಅಧಿಕಾರಿಗಳನ್ನು ಒತ್ತಾಯಿಸಿತ್ತು. ಸ್ಪಂದಿಸುವ ಭರವಸೆ ನೀಡಿದ್ದ ಸಂಸ್ಥೆಯ ಅಧಿಕಾರಿಗಳು ಬಳಿಕ ಮೌನವಹಿಸಿದ್ದರಿಂದಾಗಿ ಸತತ ನಾಲ್ಕು ದಿನಗಳ ಕಾಲ ನೀರಿಲ್ಲದೆ ಉಪ್ಪಿನಂಗಡಿ ಪೇಟೆಯ ಜನತೆ ಸಮಸ್ಯೆಗೀಡಾದರು.
ಈ ಮಧ್ಯೆ ಶನಿವಾರದಂದು ಸ್ಥಳೀಯ ನಿವಾಸಿಗರು ಕುಡಿಯುವ ನೀರಿನ ಪೈಪುಗಳನ್ನು ಸರಿಪಡಿಸದೆ ಕಾಮಗಾರಿ ಮುಂದುವರೆಸಲು ಅವಕಾಶ ನೀಡಬಾರದೆಂದು ಒತ್ತಾಯಿಸಿ ಸ್ಥಳದಲ್ಲಿ ಜಮಾಯಿಸಿದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಸದಸ್ಯ ಅಬ್ದುಲ್ ರಹಿಮಾನ್ ಕುಡಿಯುವ ನೀರಿನ ಪೈಪುಲೈನ್ ಗಳನ್ನು ಆದ್ಯತೆಯ ಮೇರೆಗೆ ಸರಿಪಡಿಸಿಕೊಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳನ್ನು ಸಂಪರ್ಕಿಸಿದ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಸತತ ನಾಲ್ಕು ದಿನಗಳಿಂದ ನೀರಿಲ್ಲದೆ ಜನ ತೀರಾ ಆಕ್ರೋಶಿತಗೊಂಡಿದ್ದು ಕಾಮಗಾರಿಯ ಗುತ್ತಿಗೆ ವಹಿಸಿದ ಸಂಸ್ಥೆಯ ಅಧಿಕಾರಿಗಳನ್ನು ತಕ್ಷಣ ಸ್ಪಂದಿಸುವಂತೆ ಅಗ್ರಹಿಸಿದರು.
ಅದರಂತೆ ಸಾಯಂಕಾಲದ ವೇಳೆಗೆ ಸ್ಥಳಕ್ಕೆ ಭೇಟಿ ನೀಡಿದ ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳು ಹಾನಿಗೀಡಾದ ಪೈಪುಗಳನ್ನು ಆದಿತ್ಯವಾರದೊಳಗೆ ಸರಿಪಡಿಸುವ ಭರವಸೆ ನೀಡಿದರು.