ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ-2023 ಶನಿವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ತಹಶೀಲ್ದಾರ್ ಜೆ.ಶಿವಶಂಕರ ದೀಪ ಪ್ರಜ್ವಲನೆ ಮಾಡಿ ಮಾತನಾಡಿ, ಜಗತ್ತಿನ ಅತ್ಯಂತ ದೊಡ್ಡ ಕೃತಿ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರ ತತ್ವ ಆದರ್ಶದ ಹಾದಿಯಲ್ಲಿ ನಾವೆಲ್ಲರೂ ನಡೆಯುವ ಅಗತ್ಯವಿದೆ ಎಂದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಚಾಲಕ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ, ಮನುಷ್ಯ ಸುಖ, ಶಾಂತಿ, ಸಂತೋಷದಿಂದ ಬದುಕಲು, ಎಲ್ಲರಿಗೂ ಸಮಬಾಳು, ಸಮಪಾಲು ಮುಂತಾದ ತತ್ವ ಆದರ್ಶಗಳನ್ನು ಹೊಂದಿರುವ ರಾಮಾಯಣವನ್ನು ಸುಮಾರು 3500 ವರ್ಷಗಳ ಹಿಂದೆ ರಚಿಸಲಾಗಿದ್ದು, ನಮ್ಮ ಬದುಕಿಗೆ ದಾರಿ ದೀಪವಾಗಿದೆ. ಇಂತಹಾ ರಾಮಾಯಣವನ್ನು ರಚಿಸಿರುವ ಮಹರ್ಷಿ ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸಂಸ್ಮರಣಾ ಉಪನ್ಯಾಸ ನೀಡಿದ ಸಂಜಯನಗರ ಶಾಲಾ ಮುಖ್ಯ ಶಿಕ್ಷಕ ರಮೇಶ್ ಉಳಯ, 24 ಸಾವಿರ ಶ್ಲೋಕಗಳನ್ನು ಒಳಗೊಂಡ ರಾಮಾಯಣ ಕೃತಿ ಸುಮಾರು 1800 ಭಾಷೆಗಳಿಗೆ ತರ್ಜುಮೆಗೊಂಡಿದೆ. ಇದರಲ್ಲಿ ತತ್ವಶಾಸ್ತ್ರ, ವಿಜ್ಞಾನ ಇದೆ. ಜತೆಗೆ ಭಾರತವನ್ನು ಪ್ರತಿಷ್ಠಾಪಿಸಿದ ಕೀರ್ತಿ ರಾಮಾಯಣಕ್ಕೆ ಸಲ್ಲುತ್ತದೆ. ಇಂತಹಾ ಕೃತಿಯನ್ನು ಬರೆದು ಜಗತ್ತನ್ನು ಬೆಳಗಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕೇವಲ ರಾಷ್ಟ್ರೀಯ ಹಬ್ಬವಲ್ಲ. ಬದಲಾಗಿದೆ ರಾಷ್ಟ್ರದ ಹಬ್ಬ. ವಾಲ್ಮೀಕಿ ಜಯಂತಿ ಆಚರಣೆಯ ಜತೆ ಅವರ ಆದರ್ಶಗಳನ್ನು ಪಾಲಿಸಿದರೆ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದರು.
ವೇದಿಕೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಸಿ.ಎಂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 2022-23ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಾದ ರಕ್ಷಿತ್ ನಾಯ್ಕ, ಅನೂಪ್ ಟಿ. ಹಾಗೂ ಲತಾಶ್ರೀ ಕೆ.ವಿ. ಅವರನ್ನು ಸನ್ಮಾನಿಸಲಾಯಿತು. ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಕೃಷ್ಣ ಬಿ. ಸ್ವಾಗತಿಸಿದರು. ಶಿಕ್ಷಣ ಇಲಾಖೆಯ ಹರಿಪ್ರಸಾದ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.