ಪುತ್ತೂರು: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವುಗೊಂಡಿದ್ದು, ಸರಕಾರ ದ.ಕ. ಜಿಲ್ಲೆಗೆ 546 ಶಿಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಈ ಪೈಕಿ ಪುತ್ತೂರಿಗೆ 131 ಶಿಕ್ಷಕರನ್ನು ನೇಮಿಸಲಾಗಿದೆ.
ಪುತ್ತೂರು ಸೇರಿದಂತೆ ದ ಕ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ ಶಿಕ್ಷಕರನ್ನು ನೇಮಕ ಮಾಡುವಂತಿರಲಿಲ್ಲ. ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇದ್ದ ಕಾರಣ ಕಳೆದ ಕೆಲವು ವರ್ಷಗಳಿಂದ ಅಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿತ್ತು. ಇದೀಗ ನ್ಯಾಯಾಲಯವು ತಡೆಯಾಜ್ಞೆಯನ್ನು ತೆರವು ಮಾಡಿದ್ದರಿಂದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ನ್ಯಾಯಾಲಯದ ತಡೆಯಾಜ್ಞೆ ವಿಚಾರವನ್ನು ಪುತ್ತೂರು ಶಾಸಕರಾದ ಅಶೋಕ್ ರೈ ಸರಕಾರದ ಗಮನಕ್ಕೆ ತಂದಿದ್ದರು. ಶಿಕ್ಷಕರ ಕೊರತೆಯಿಂದ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ನೇಮಕಾತಿ ವಿಚಾರದಲ್ಲಿ ಸರಕಾರವು ಮಧ್ಯ ಪ್ರವೇಶ ಮಾಡುವಂತೆ ಅವರು ಮನವಿ ಮಾಡಿದ್ದರು.
ಗ್ರಾಮೀಣ ಭಾಗದ ಶಿಕ್ಷಕರು ಪಟ್ಟಣಕ್ಕೆ:
ನೂತನವಾಗಿ ನೇಮಕಗೊಂಡ ಎಲ್ಲಾ ಶಿಕ್ಷಕರು ಗ್ರಾಮೀಣ ಭಾಗದ ಶಾಲೆಗೆ ನಿಯುಕ್ತಿಗೊಳ್ಳಲಿದ್ದು ಅಲ್ಲಿದ್ದ ಹಿರಿಯ ಶಿಕ್ಷಕರನ್ನು ಪಟ್ಟಣದ ಶಾಲೆಗಳಿಗೆ ನಿಯುಕ್ತಿಗೊಳಿಸಲಾಗುವುದು ಎಂದು ಶಾಸಕರು ತಿಳಿಸಿದ್ದು ಈ ವಿಚಾರವನ್ನು ಶಿಕ್ಷಣ ಸಚಿವಾಲಯದ ಗಮನಕ್ಕೆ ತಂದಿದ್ದಾರೆ. ನೇಮಕಾತಿ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, ಪುತ್ತೂರು ತಾಲೂಕಿಗೆ 66 ಶಿಕ್ಷಕರನ್ನು ಈಗಾಗಲೇ ನಿಯುಕ್ತಿಗೊಳಿಸಿ ಆದೇಶ ಮಾಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.