ಪುತ್ತೂರು: ನ.1 ರಂದು ನಡೆಯಲಿರುವ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಸುವ ಬಗ್ಗೆ ಕುರಿತು ವಿವಿಧ ಸಂಘ ಸಂಸ್ಥೆಗಳ ಸಮಾಲೋಚನಾ ಸಭೆ ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ತಹಶೀಲ್ದಾರ್ ಜೆ.ಶಿವಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಕರ್ನಾಟಕ ರಾಜ್ಯ ಎಂದು ಮರು ನಾಮಕರಣಗೊಂಡು ಐವತ್ತು ವರ್ಷ ಪೂರ್ಣಗೊಂಡಿದ್ದು ಈ ಹಿನ್ನೆಲೆಯಲ್ಲಿ ನ.1 ರಂದು ನಡೆಯಲಿರುವ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಹಿಂದೆ ತಾಲೂಕಿನಲ್ಲಿ ಕನ್ನಡ ರಾಜ್ಯೋತ್ಸವವು ಅದ್ಧೂರಿಯಾಗಿ ನಡೆಯುತಿತ್ತು. ಈ ಬಾರಿ ಮತ್ತೆ ಅದು ಪುನರಾವರ್ತನೆ ಆಗಬೇಕು. ಹಾಗಾಗಿ ಕಸಾಪ ನೇತೃತ್ವದಲ್ಲಿ ನ.1 ರಂದು ಬೆಳಿಗ್ಗೆ 8 ಗಂಟೆಗೆ ದರ್ಬೆ ವೃತ್ತದಿಂದ ಕನ್ನಡ ಭುವನೇಶ್ವರಿಯ ಭಾವಚಿತ್ರದೊಂದಿಗೆ ಪುರಭವನದ ತನಕ ಮೆರವಣಿಗೆ ನಡೆಸುವ ಬಗೆಗಿನ ರೂಪುರೇಷೆಯ ಬಗ್ಗೆ ಮಾಹಿತಿ ನೀಡಿದರು.
ಒಟ್ಟು 30 ಸಂಘಟನೆಗಳು ಸೇರಿ ಈ ಮೆರವಣಿಗೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. ಮೆರವಣಿಗೆಯಲ್ಲಿ ನಗರದ ಆಯ್ದ ಶಾಲೆಗಳಿಂದ ತಲಾ 50 ರಂತೆ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಕೀಲುಕುದುರೆ, ವಾದ್ಯ ಸಹಿತ ವಿವಿಧ ಕಲಾ ಪ್ರಕಾರಗಳನ್ನು ಜೋಡಿಸಿಕೊಂಡು ಮೆರವಣಿಗೆಯನ್ನು ಅರ್ಥಪೂರ್ಣವಾಗಿಸುವ ಉದ್ದೇಶ ಇದೆ ಎಂದರು.
ಮೆರವಣಿಗೆಯು ಕಿಲ್ಲೆ ಮೈದಾನಕ್ಕೆ ಬರಲಿದ್ದು ಬೆಳಗ್ಗೆ 9 ಗಂಟೆಗೆ ರಾಷ್ಟ್ರ ಧ್ವಜಾರೋಹಣ ನೆರವೇರಲಿದೆ. ಬಳಿಕ ಪುರಭವನದಲ್ಲಿ ಕನ್ನಡ ಧ್ವಜರೋಹಣ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಫರೀದ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತರಿರಲಿದ್ದಾರೆ. ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ ಧ್ವಜಾರೋಹಣ ಮತ್ತು ವಂದನೆ ಸ್ವೀಕರಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಹಲವು ಸಾಧಕರಿಗೆ ಸಮ್ಮಾನ ನಡೆಯಲಿದೆ ಎಂದರು.
ಸಭೆಯಲ್ಲಿ ಶಿಕ್ಷಣ ಇಲಾಖೆಯ ಹರಿಪ್ರಸಾದ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಡಾ|ರಾಜೇಶ್ ಬೆಜ್ಜಂಗಳ, ರೋಟರಿ ಕ್ಲಬ್ ಸ್ವರ್ಣ ಅಧ್ಯಕ್ಷ ಸುಂದರ ರೈ, ಪುತ್ತೂರು ಜನ್ಮ ಪೌಂಡೇಶನ್ ಹರ್ಷ ಕುಮಾರ್ ರೈ, ಕನ್ನಡ ಸಾಹಿತ್ಯ ಪರಿಷತ್ತಿನ ಶಂಕರಿ ಶರ್ಮ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಗ್ರೇಸಿ ಗೋಂಸಾಲ್ವಿಸ್, ವರ್ತಕರ ಸಂಘದ ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ಜೋನ್ ಕುಟಿನ್ಹಾ, ವರ್ತಕ ಸಂಘದ ಕಾರ್ಯದರ್ಶಿ ಉಲ್ಲಾಸ್ ಪೈ, ತಾಲೂಕು ಪರ್ತಕರ್ತರ ಸಂಘದ ಅಧ್ಯಕ್ಷ ಸಿದ್ದಿಕ್ ನೀರಾಜೆ, ಗೂಡ್ಸ್ ಚಾಲಕ ಮಾಲಕರ ಸಂಘದ ಸುರೇಶ್ ಗೌಡ, ರಘುರಾಮ, ಮೋಹನ್, ಚಂದ್ರಶೇಖರ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಂಘಟನಾ ಕಾರ್ಯದರ್ಶಿ ವೇದಾವತಿ ಮೊದಲಾದವರು ಉಪಸ್ಥಿತರಿದ್ದರು.