ಮಂಗಳೂರು: ಹುಲಿಉಗುರು ಪ್ರಕರಣ ದಿನದಿಂದ ದಿನಕ್ಕೆ ಕಾವೇರುತ್ತಿದ್ದಂತೆ ವನ್ಯಜೀವಿ ಹಾಗೂ ಅದರ ಅಂಗಗಳ ಸಂಗ್ರಹ ಪ್ರಕರಣದ ತನಿಖೆಗೆ ವನ್ಯಜೀವಿ ಸಂರಕ್ಷಣಾಧಿಕಾರಿಗಳನ್ನು ಒಳಗೊಂಡ ಮೂರು ಸದಸ್ಯರ ಸಮಿತಿಯನ್ನು ಅರಣ್ಯ ಇಲಾಖೆ ರಚಿಸಿ ಸೂಕ್ತ ಕ್ರಮಕ್ಕೆ ಇದೀಗ ಮುಂದಾಗಿದೆ.
ಈ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಸೆಲೆಬ್ರಿಟಿಗಳು ಸೇರಿದಂತೆ ಮತ್ತಿತರರು ಹುಲಿಉಗುರು ಪೆಂಡೆಂಟ್ ಧರಿಸಿರುವುದು ಕಂಡು ಬಂದಿದ್ದು, ಇದು ಕಾನೂನು ಪ್ರಕಾರ ಅಪರಾಧವಾಗಿರುವುದರಿಂದ ಪ್ರಾಣಿಗಳ ವಧೆ ಮಾಡಿ ಅಂಗಾಂಗ ಸಂಗ್ರಹದಂತಹ ಪ್ರಕರಣವನ್ನು ತನಿಖೆಗೊಳಪಡಿಸಿ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದೆ.
1972 ರ ಕಾಯ್ದೆ ಪ್ರಕಾರ ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳ ಸಂಗ್ರಹ ನಿಷೇಧಿಸಲಾಗಿದೆ. ಇಂತಹಾ ವಸ್ತುಗಳ ಸಂಗ್ರಹವಿದ್ದಲ್ಲಿ ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸುವಂತೆ ಅಥವಾ ದೃಢೀಕರರಣ ಪತ್ರ ಪಡೆಯುವಂತೆ ಸೂಚಿಸಲಾಗಿದೆ. ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಸಚಿವರು ಆದೇಶದಲ್ಲಿ ಸೂಚಿಸಿದ್ದಾರೆ.