ಪುತ್ತೂರು: ಅ 15ರಂದು ಪುತ್ತೂರಿನ ಸಂಪ್ಯ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಆರಂಭಗೊಂಡ ಪುತ್ತೂರು ದಸರಾ ಉತ್ಸವ ಗುರುವಾರ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು.
ಗುರುವಾರ ಸಂಜೆ ನಡೆದ ದಸರಾ ಮರವಣಿಗೆ ಜನಮನ ಸೂರೆಗೊಂಡಿತು.
ನವದುರ್ಗೆ ಮತ್ತು ಶಾರದೆ ಹಾಗೂ ಮಹಾ ಗಣಪತಿ ವಿಗ್ರಹಗಳ ಮೆರವಣಿಗೆಗೆ ವಿಶ್ವಹಿಂದೂ ಪರಿಷತ್ ಮುಖಂಡರಾದ ಯು. ಪೂವಪ್ಪ ಚಾಲನೆ ನೀಡಿದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಕುಣಿತ ಭಜನಾ ಮೆರವಣಿಗೆಗೆ ಚಾಲನೆ ನೀಡಿದರು. ನವದುರ್ಗಾರಾಧನಾ ಸಮಿತಿಯ ಅಧ್ಯಕ್ಷರಾದ ಜಯಂತ ಶೆಟ್ಟಿ ಕಂಬಳದಡ್ಡ, ಸಂಚಾಲಕರಾದ ಪ್ರೀತಂ ಪುತ್ತೂರಾಯ, ಪ್ರಮುಖರಾದ ರಾಧಾಕೃಷ್ಣ ಬೋರ್ಕರ್, ಸಹಜ ರೈ ಬಳೆಜ್ಜ, ರಾಜೇಶ್ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.
ಆದಿಶಕ್ತಿ, ಗಣಪತಿ, ಶಾರದೆ ಮತ್ತು ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ ದೇವಿಯರನ್ನು ಹೊತ್ತ ರಥಗಳು ನಾನಾ ಟ್ಯಾಬ್ಲೋಗಳ ಜತೆ, ಕುಣಿತ ಭಜನಾ ತಂಡಗಳೊಂದಿಗೆ ಸಂಗಮಿಸಿಕೊಂಡು ಪುತ್ತೂರು ನಗರದಲ್ಲಿ ದರ್ಬೆಯಿಂದ ಬೊಳುವಾರುವರೆಗೆ ಮೆರವಣಿಗೆ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನ ಶೋಭಾಯಾತ್ರೆ ವೀಕ್ಷಿಸಿದರು.