ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಒಂಭತ್ತು ದಿನಗಳ ಕಾಲ ನಡೆದ ಪುತ್ತೂರು ಶಾರದೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಸಮಾಪನಗೊಂಡಿತು.
ಸಂಜೆ ಶ್ರೀ ದೇವಸ್ಥಾನದಲ್ಲಿ ಶ್ರೀ ಶಾರದಾ ಮಾತೆಗೆ ಮಹಾಪೂಜೆ ಬಳಿಕ ಶೋಭಾಯಾತ್ರೆ ಹೊರಟು ಬೊಳುವಾರಿಗೆ ತೆರಳಿತು. ಅಲ್ಲಿ ಮೆರವಣಿಗೆಗೆ ಚಾಲನೆ ನೀಡಿ ಭಜನಾ ತಂಡಗಳ ಸಹಸ್ರಾರು ಭಜಕರು ಕುಣಿತ ಭಜನೆಯೊಂದಿಗೆ, ಆಕರ್ಷಕ ಸ್ತಬ್ಧಚಿತ್ರ, ಡೊಳ್ಳು ಕುಣಿತ, ಮುಂತಾದ ಹತ್ತು ಹಲವಾರು ಆಕರ್ಷಣೆಯೊಂದಿಗೆ ಬೊಳುವಾರಿನಿಂದ ಮುಖ್ಯರಸ್ತೆಯಲ್ಲಿ ಆಗಮಿಸಿ, ಬಸ್ ನಿಲ್ದಾಣ, ಕಲ್ಲಾರೆ, ದರ್ಬೆ ಮಾರ್ಗವಾಗಿ ಪರ್ಲಡ್ಕ ದಿಂದ ಸಾಗಿ ಶ್ರೀ ದೇವಸ್ಥಾನದ ಕೆರೆಯಲ್ಲಿ ಶಾರದಾ ಮಾತೆಯ ವಿಗ್ರಹ ಜಲಸ್ತಂಭನ ಮಾಡಲಾಯಿತು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು, ಸಂಚಾಲಕ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಕಾರ್ಯಾಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ, ಶೋಭಾಯಾತ್ರೆ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಭಜನಾ ಮಂದಿರದ ಅಧ್ಯಕ್ಷ ಕೆ. ಸಾಯಿರಾಮ ರಾವ್, ಕಾರ್ಯದರ್ಶಿ ಕೆ. ಜಯಂತ ಉರ್ಲಾಂಡಿ, ಕೋಶಾಧಿಕಾರಿ ತಾರನಾಥ ಎಚ್., ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.