ಉಪ್ಪಿನಂಗಡಿ: ಕೆಎನ್ಆರ್ ಸಂಸ್ಥೆಯಲ್ಲಿ ಸೈಟ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಪರ್ನೆಯಲ್ಲಿ ನಡೆದಿದೆ.
ತಮಿಳುನಾಡು ಮೂಲದ ಅನೂಫ್ (47) ಮೃತಪಟ್ಟವರು.
ಅನೂಫ್ ಅವರು ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಕೆಎನ್ಆರ್ ಸಂಸ್ಥೆಯಲ್ಲಿ ಸೈಟ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅ.21 ರಂದು ಉಪ್ಪಿನಂಗಡಿ ಪ್ರದೇಶದಲ್ಲಿ ಕೆಲಸ ನಿರ್ವಹಿಸಲು ವರ್ಗಾವಣೆಯಾಗಿ ಬಂದಿದ್ದರು. ಪೆರ್ನೆಯ ಮುಸ್ತಾಫ ಎಂಬವರ ಮಾಲಕತ್ವದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಅ.22 ರಂದು ಸಹೋದ್ಯೋಗಿಯೊಬ್ಬರು ಮನೆಗೆ ತೆರಳಿ ವಾಪಾಸ್ಸು ಬಂದವರು ರಜೆಯ ಹಿನ್ನಲೆಯಲ್ಲಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎನ್ನಲಾಗಿದೆ.
ಮಂಗಳವಾರ ವಾಹನ ಚಾಲಕ ಅನೂಫ್ ಅವರಿಗೆ ಫೋನ್ ಕರೆ ಮಾಡಿದಾಗ ಕರೆ ಸ್ವೀಕರಿಸದೇ ಇದ್ದಾಗ ಅವರ ವಾಸ್ತವ್ಯದ ಮನೆಗೆ ಬಂದಾಗ ಒಳಗಿನಿಂದ ಚಿಲಕ ಹಾಕಲಾಗಿತ್ತು. ಕಿಟಕಿಯಿಂದ ನೋಡಿದಾಗ ಬಾಯಿ ಹಾಗೂ ಮೂಗಿನಲ್ಲಿ ರಕ್ತಸ್ರಾವವಾದ ರೀತಿಯಲ್ಲಿ ಮೃತಪಟ್ಟಿದ್ದರು.
ಸಂಸ್ಥೆಯ ಚಾಲಕ ರಮೇಶ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.