ಪುತ್ತೂರು: ಪುತ್ತೂರಿನಲ್ಲಿ ಈ ಬಾರಿ ಸುಮಾರು 50 ಸಾವಿರ ಮಂದಿಗೆ ವಸ್ತ್ರ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಬಡವರ ಜೊತೆ ಸಹಭೋಜನವನ್ನು ಮಾಡಲಿದ್ದೇನೆ. ಈ ಉದ್ದೇಶದಿಂದಲೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ನಡೆದ 19ನೇ ವರ್ಷದ ನವರಾತ್ರಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಇನ್ನೊಬ್ಬರ ಕಷ್ಟಕ್ಕೆ ನೆರವಾಗುವುದೇ ಧರ್ಮ. ಜಾತಿಮತಗಳ ಭೇದವಿಲ್ಲದೆ ಎಲ್ಲರೊಂದಿಗೆ ಸಹೋದರ ಭಾವನೆಯಿಂದ ಬದುಕುವುದು ಮತ್ತು ಧರ್ಮಗಳ ನಡುವೆ ಪರಸ್ಪರ ಸೌಹಾರ್ಧತೆಯ ವಾತಾವರಣ ಇದ್ದರೆ ಮಾತ್ರ ನಮ್ಮ ಭಾರತ ವಿಶ್ವಗುರುವಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಬನ್ನೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್ ಮಾತನಾಡಿದರು. ವೇದಿಕೆಯಲ್ಲಿ ಭಜನಾ ಮಂದಿರ ಅಧ್ಯಕ್ಷ ಗಣೇಶ್ ಗೌಡ, ಪಡ್ಡಾಯೂರು ಕಾಂಗ್ರೆಸ್ ಬೂತ್ ಅಧ್ಯಕ್ಷ ಲೋಕೇಶ್ ಪಡ್ಡಾಯೂರು ಉಪಸ್ಥಿತರಿದ್ದರು. ಮೋಹನ್ ಪಡ್ಡಾಯೂರು ಸ್ವಾಗತಿಸಿ, ವಂದಿಸಿದರು.