ಪುತ್ತೂರು: ಪ್ರತಿಯೊಬ್ಬರ ಮನೆಯಲ್ಲೂ ಉಪಯೋಗವಾಗದ ವಸ್ತುಗಳು ಇದ್ದೇ ಇರುತ್ತವೆ, ಅದರ ವಿಲೇವಾರಿಯೇ ಕಷ್ಟ. ಹೊಸ ವಸ್ತು ತಂದರೆ ಹಳೆವಸ್ತುಗಳು ಕೆಟ್ಟಿದ್ದರೂ ಅದನ್ನು ಎಸೆಯಲು ಮನಸ್ಸು ಬರುವುದಿಲ್ಲ ಅನಗತ್ಯ ಶೇಖರಣೆಯೂ ಅಸಾಧ್ಯ.
ಇವೆಲ್ಲ ಚಿಂತೆಗಳನ್ನು ದೂರ ಮಾಡಲು, ಪರಿಹಾರ ಕಂಡುಕೊಳ್ಳಲು, ಇತ್ಯಾದಿಗಳಿಗೆ ಪರಿಹಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಳೆದ 5 ವರ್ಷಗಳಿಂದ ಸದ್ದಿಲ್ಲದೆ ಸೇವೆ ನೀಡುತ್ತಿರುವ ವ್ಯವಸ್ಥೆಯೇ ‘ವಾಲ್ ಆಪ್ ಹ್ಯುಮೆನಿಟಿ’
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿಯವರ ಕನಸಿಸ ಯೋಜನೆ ಇದಾಗಿದೆ. ಅನುಷ್ಠಾನವಾಗಿ 5 ವರ್ಷ ಕಳೆದಿದ್ದು, ಮಂಗಳೂರು- ಮೈಸೂರು ಹೆದ್ದಾರಿಯ ಪುತ್ತೂರು ಬೈಪಾಸ್ ರಸ್ತೆಯ ಅಶ್ಮಿ ಕಂಪರ್ಟ್ಸ್ ನ ಅಂಗಳದ ಬದಿಯಲ್ಲಿ ಈ ವ್ಯವಸ್ಥೆ ಸದ್ದಿಲ್ಲದೆ ಸೇವೆ ನೀಡುತ್ತಿದೆ. ಬಳಕೆ ಮಾಡಿದ, ಉತ್ತಮ ಸ್ಥಿತಿಯಲ್ಲಿರುವ ಯಾವುದೇ ವಸ್ತುಗಳಿಗೆ ಇಲ್ಲಿ ಸ್ಥಾನವಿದೆ.
ಕಳೆದ ಈ ಐದು ವರ್ಷಗಳಲ್ಲಿ ಅದೆಷ್ಟೋ ವಸ್ತುಗಳು ಇಲ್ಲಿರುವ ವಿವಿಧ ಪದರಗಳಲ್ಲಿ ಸೇರಿದೆ. ಅಷ್ಟೇ ವೇಗವಾಗಿ ನಿಜವಾದ ಫಲಾನುಭವಿಗಳ ಅವಶ್ಯಕತೆಗಳನ್ನೂ ಪೂರೈಸಿದೆ.
ಆದರೆ ತೀರಾ ಉಪಯೋಗಕ್ಕೆ ಇಲ್ಲದ, ಕಸದ ಬುಟ್ಟಿಗೆ ಬಿಸಾಡಬಹುದಾದ ವಸ್ತುಗಳು ಇಲ್ಲಿಗೂ ಬೇಡ. ನಾವು ಪ್ರಾಮಾಣಿಕವಾಗಿ, ನಮ್ಮಮನಸಾಕ್ಷಿಗೆ ಅನುಗುಣವಾಗಿ ನೀಡುವ ವಸ್ತುಗಳಿಗೆ ಮಾತ್ರ ಇಲ್ಲಿ ಸ್ಥಾನ. ನೆನಪಿಡಿ ಇದು ಕಸದ ತೊಟ್ಟಿಯಲ್ಲ ಬದಲಾಗಿ ಮಾನವೀಯತೆಯ ತೊಟ್ಟಿಲು.
ಪುತ್ತೂರು ನಗರ ವ್ಯಾಪ್ತಿಯ ಅಥವಾ ಸಮೀಪದ ಸಹೃದಯರು ತಮ್ಮಲ್ಲಿರುವ ಉತ್ತಮ ವಸ್ತುಗಳನ್ನು ಇಲ್ಲಿ ಇರಿಸಿದರೆ, ಹಲವರಿಗೆ ಉಪಯೋಗವಾದೀತು.
ಬಳಕೆಗೆ ಯೋಗ್ಯವಾದ ಚಪ್ಪಲಿ, ಬಟ್ಟೆಬರೆ, ಪಾತ್ರ ಸಾಮಗ್ರಿಗಳು, ಮಕ್ಕಳ ಆಟಿಕೆಗಳು, ನೋಟ್ಸ್ ಪುಸ್ತಕ ಇತ್ಯಾದಿಗಳನ್ನು ಇಲ್ಲಿ ಇರಿಸಬಹುದು. ಅದಕ್ಕಾಗಿ ಬೇರೆ ಬೇರೆ ವಿಭಾಗಗಳನ್ನೂ ಮಾಡಲಾಗಿದೆ. ಸಂತೋಷ್ ಶೆಟ್ಟಿಯವರ ಈ ಯೋಜನೆ ಸದುಪಕಾರವಾಗಿ ಮುಂದುವರಿಯುತ್ತಲೇ ಬಂದಿದೆ.