ಪುತ್ತೂರು: ಜಿಲ್ಲೆಯಲ್ಲಿ ಅಡಕೆಗೆ ಎಲೆಚುಕ್ಕಿ ರೋಗ ಸುಳ್ಯ ಮತ್ತು ಪಾಣಾಜೆ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದು, ಈ ವಿಚಾರವನ್ನು ತಕ್ಷಣವೇ ಕೃಷಿ ಸಚಿವರ ಗಮನಕ್ಕೆ ತರಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಇಡ್ಕಿದು ಸೇವಾ ಸಹಕಾರಿ ಸಂಘದ ಕುಳ ಕುಂಡಡ್ಕ ಶಾಖೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಎಲೆ ಚುಕ್ಕಿ ರೋಗ ಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ರೋಗಕ್ಕೆ ಸೂಕ್ತ ಔಷಧಿಯ ವ್ಯವಸ್ಥೆ ಬಗ್ಗೆಯೂ ಕೃಷಿ ವಿಜ್ಞಾನಿಗಳ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.
ಕೇವಲ ಬ್ಯಾಂಕ್ ಗಳನ್ನು ಸ್ಥಾಪನೆ ಮಾಡಿದರೆ ಸಾಲದು ಇಲ್ಲಿ ಉದ್ಯಮವೂ ಬೆಳೆಯಬೇಕು. ಉದ್ಯಮಗಳು ಬೆಳೆದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಊರಿನ ಯಾವುದೇ ಸಂಸ್ಥೆಗಳು ಊರಿನ ಅಭಿವೃದ್ದಿಗೆ ಪೂರಕವಾಗುತ್ತದೆ. ಸಹಕಾರಿ ಕ್ಷೇತ್ರ ಇಂದು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.
ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಎಂ ಎನ್ ರಾಜೇಂದ್ರ ಕುಮಾರ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಟಿ.ಬಿ ರಾಜಾರಾಂ ಭಟ್, ಇಡ್ಕಿದು ಗ್ರಾಪಂ ಅಧ್ಯಕ್ಷೆ ಮೋಹಿನಿ ಜಯಕರ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಸಂಘದ ಅಧ್ಯಕ್ಷ ಸುಧಾಕರ ಶೆಟ್ಡಿ ಬೀಡಿನಮಜಲು, ಉಪಾಧ್ಯಕ್ಷ ರಾಂ ಭಟ್ ನೀರಪಳಿಕೆ ಮತ್ತಿತರರು ಉಪಸ್ಥಿತರಿದ್ದರು.