ಮತ್ತೊಂದು ಚುನಾವಣಾ ಟಿಕೆಟ್ ವಂಚನೆ ಪ್ರಕರಣ ಬೆಳಕಿಗೆ! | 2.55 ಕೋಟಿ ರೂ. ಪಂಗನಾಮ!

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಚುನಾವಣಾ ಟಿಕೆಟ್ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ನಾಲ್ವರ ವಿರುದ್ಧ ಪೊಲೀಸ್ ಎಫ್ ಐಆರ್ ದಾಖಲಾಗಿದೆ.

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣ ಇದಾಗಿದ್ದು, ಕೊಟ್ಟೂರು ನಿವಾಸಿ, ನಿವೃತ್ತ ಎಂಜಿನಿಯರ್‌ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಶಿವಮೂರ್ತಿ ಎಂಬುವವರಿಗೆ ನಾಲ್ವರ ತಂಡವು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಮೂರ್ತಿ, ಪಕ್ಷದ ಚಟುವಟಿಕೆಗಾಗಿ 65 ಲಕ್ಷ ರೂಪಾಯಿಯನ್ನು ಖರ್ಚು ಮಾಡಿಸಲಾಗಿದೆ. ಅಲ್ಲದೆ, ಟಿಕೆಟ್‌ ಕೊಡಿಸುವುದಾಗಿ ವಂಚಕರು ತಮ್ಮ ಬಳಿ ಒಟ್ಟು 1.90 ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಒಟ್ಟು 2.55 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಅಕ್ಟೋಬರ್‌ 19ರಂದು ಶಿವಮೂರ್ತಿ ಅವರು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ನೀಡಿದ ದೂರಿನನ್ವಯ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದಾರೆ. 































 
 

90 ಲಕ್ಷ ರೂ. ಚೆಕ್‌ ಬೌನ್ಸ್
ಟಿಕೆಟ್ ಸಿಗದಿದ್ದಾಗ ಹಣ ವಾಪಸ್ ಕೇಳಿದೆ. ಅದಕ್ಕೆ 90 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ಅಕ್ಟೋಬರ್‌ 10ರ ದಿನಾಂಕವನ್ನು ಹಾಕಲಾಗಿತ್ತು. ಆದರೆ, ಚೆಕ್‌ ಬೌನ್ಸ್‌ ಆಗಿದೆ ಎಂದು ಸಹ ಶಿವಮೂರ್ತಿ ಆರೋಪ ಮಾಡಿದ್ದಾರೆ.

ಕೊಟ್ಟೂರಿನ ಕಟಾರಿ ಆಪ್ಟಿಕಲ್ ಮಾಲೀಕ ಮೋಹನ್ ಕಟಾರಿಯಾ, ಬಿಜೆಪಿ ಮಾಜಿ ಮುಖಂಡ, ಹಾಲಿ ಜನಾರ್ದನ ರೆಡ್ಡಿ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ ಹಾಗೂ ಪುತ್ತೂರು ಮೂಲದ ಶೇಖರ್ ಪುರುಷೋತ್ತಮ್ ನಿರ್ಲಕಟ್ಟೆ (ರಾಜಶೇಖರ್) ಎಂಬುವವರಿಂದ ವಂಚನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು 1.90 ಕೋಟಿ ರೂಪಾಯಿಯನ್ನು ಇದುವರೆಗೆ ಪಡೆಯಲಾಗಿದೆ. ಅದರಲ್ಲಿ 65 ಲಕ್ಷ ರೂಪಾಯಿಯನ್ನು ಪಕ್ಷದ ಬೇರೆ ಬೇರೆ ವಿಚಾರಕ್ಕೆ ಖರ್ಚು ಮಾಡಿಸಲಾಗಿದೆ ಎಂದು ಆರೋಪ ಮಾಡಿರುವ ಶಿವಮೂರ್ತಿ, ತಾವು ಕೊಟ್ಟಿರುವ ಎಲ್ಲ ಹಣದ ದಾಖಲೆ ಸಮೇತ ದೂರು ನೀಡಿದ್ದಾರೆ. ಅಲ್ಲದೆ, ಈಗ ಹಣವನ್ನು ವಾಪಸ್ ಕೇಳಿದ್ದಕ್ಕೆ ಧಮಕಿ ಹಾಕುತ್ತಿದ್ದಾರೆ ಎಂದು ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಿಎಂ, ಗೃಹ ಸಚಿವರಿಗೆ ಪತ್ರ
ಹಣ ಕಳೆದುಕೊಂಡ ಶಿವಮೂರ್ತಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ಗೆ ಪತ್ರ ಬರೆದು ಮನವಿ ಮಾಡಿದ್ದರು. ತಮಗೆ ವಂಚನೆ ಮಾಡಿದವರ ಬಗ್ಗೆ ಸಂಪೂರ್ಣ ವಿವರವನ್ನು ಹಾಕಿ, ಮೋಸ ಮಾಡಿದವರ ಮೇಲೆ ಕ್ರಮ ಕೈಗೊಂಡು ತಮ್ಮ ಹಣವನ್ನು ವಾಪಸ್‌ ಕೊಡಿಸುವಂತೆ ಕೋರಿದ್ದಾರೆ. ಈ ವಂಚಕರು ತಮಗೆ 2022ರ ಅಕ್ಟೋಬರ್ 23ಕ್ಕೆ ಪುತ್ತೂರು ಬಿಜೆಪಿ ಮುಖಂಡ ಶೇಖರ್‌ಗೆ ಪರಿಚಯ ಮಾಡಿಸಿದೆ. ಬಳಿಕ ನಳಿನ್ ಕುಮಾರ್ ಕಟೀಲ್ ಅವರನ್ನು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿಸಿತ್ತು. ನಳಿನ್ ಕುಮಾರ್ ಕಟೀಲ್ ಕೂಡಾ ಟಿಕೆಟ್ ವಿಚಾರ ಪುತ್ತೂರು ಬಿಜೆಪಿ ಮುಖಂಡ ಶೇಖರ್ ಎನ್.ಪಿ ಬಳಿಯೇ ಮಾತನಾಡಿ ಎಂದು ಹೇಳಿದ್ದರು ಎಂದು ಶಿವಮೂರ್ತಿ ಅವರು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top