ಪುತ್ತೂರು: ಈ ಡಿಜಿಟಲ್ ಗ್ರಂಥಾಲಯ ಕೇವಲ ಪುಸ್ತಕಗಳನ್ನು ಓದುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಇಲ್ಲಿ ಚೆಸ್, ಕ್ಯಾರಂ ಮುಂತಾದ ಆಟಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಿ ಈ ಮೂಲಕ ಮಕ್ಕಳ ಕೌಶಲ್ಯ ಹೆಚ್ಚಿಸುವ ಕಾರ್ಯವನ್ನೂ ಮಾಡುತ್ತಿದೆ.

ಇದು ನರಿಮೊಗರು ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯದ ವಿಶೇಷತೆ.

ಈ ಗ್ರಾಪಂ ಪುತ್ತೂರು ತಾಲೂಕಿನ 21 ಗ್ರಾಪಂಗಳ ಪೈಕಿ ಅತೀ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪುತ್ತೂರು ತಾಲೂಕಿನಲ್ಲಿ ಪ್ರಪ್ರಥಮವಾಗಿ ಡಿಜಿಟಲ್ ಗ್ರಂಥಾಲಯ ಆರಂಭವಾದದ್ದು ಇದೇ ಗ್ರಾಪಂನಿಂದ.

ಈ ಗ್ರಾಪಂ ಡಿಜಿಟಲ್ ಗ್ರಂಥಾಲಯ ವಿಶಾಲವಾಗಿದ್ದು, ಗ್ರಂಥಾಲಯದ ಒಳಪ್ರವೇಶಿಸಿದರೆ ಸಾಕು ಎಂತವರನ್ನೂ ಆಕರ್ಷಿಸುತ್ತಿದೆ. ಮೇಲ್ಛಾವಣಿ ಅಷ್ಟೊಂದು ಅಚ್ಚುಕಟ್ಟಾಗಿದೆ. ಒಟ್ಟಾರೆಯಾಗಿ ಆಧುನಿಕ ಡಿಜಿಟಲ್ ಗೆ ಪೂರಕವಾಗಿದೆ. ಪುಸ್ತಕಗಳನ್ನು ಓದುವ ಜತೆಗೆ ಗ್ರಂಥಾಲಯದಲ್ಲಿ ಶಾಲಾ ಮಕ್ಕಳು ಚೆಸ್, ಕ್ಯಾರಂ ಮತ್ತಿತರ ಕೌಶಲ್ಯ ಡೆವಲಪ್ಮೆಂಟ್ ಆಟಗಳನ್ನು ಆಡುವ ಮೂಲಕ ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳುತ್ತಿರುವುದು ವಿಶೇಷತೆಯಾಗಿದೆ.

ಈ ಡಿಜಿಟಲ್ ಗ್ರಂಥಾಲಯ ಸುಮಾರು 10 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಒಳಗೊಂಡಿದ್ದು, ಈ ಪೈಕಿ ಸುಮಾರು 500 ರಿಂದ 600 ಪುಸ್ತಕಗಳು ದಾನಿಗಳಿಂದ ಕೊಡುಗೆಯಾಗಿ ನೀಡಲಾಗಿದೆ. ಉಳಿದದ್ದು ಗ್ರಂಥಾಲಯ ಇಲಾಖೆ ನೀಡಿದೆ. ಈಗಾಗಲೇ ಈ ಗ್ರಂಥಾಲಯದಲ್ಲಿ ಸುಮಾರು 670 ಮಂದಿ ಸದಸ್ಯರಿದ್ದು, ಈ ಪೈಕಿ 270 ಮಕ್ಕಳೇ ಸದಸ್ಯರಾಗಿದ್ದಾರೆ. ಮಕ್ಕಳಿಗೇ ಸಂಬಂಧಿಸಿದ ಹಲವಾರು ಪುಸ್ತಕಗಳು ಇಲ್ಲಿವೆ. ಈ ಗ್ರಾಪಂ ವ್ಯಾಪ್ತಿಯಲ್ಲಿ 5 ಸರಕಾರಿ ಶಾಲೆ ಹಾಗೂ ಎರಡು ಖಾಸಗಿ ಶಾಲೆಗಳಿದ್ದು, ವಾರದ ಶನಿವಾರ, ಆದಿತ್ಯವಾರದಂದು ಬಹುತೇಕ ಮಕ್ಕಳು ಭೇಟಿ ನೀಡಿ ಪುಸ್ತಕಗಳು, ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಜತೆಗೆ ಚೆಸ್, ಕ್ಯಾರಂ ಆಟಗಳಲ್ಲಿ ತೊಡಗಿಕೊಳ್ಳುತ್ತಾರೆ. ಶಾಲಾ ರಜಾ ದಿನಗಳಲ್ಲಂತೂ ಇಲ್ಲಿ ಶಾಲಾ ಮಕ್ಕಳಿಂದ ತುಂಬಿ ತುಳುಕುತ್ತಿರುತ್ತದೆ.
ಈ ಗ್ರಂಥಾಲಯದ ವತಿಯಿಂದ ತಿಂಗಳಿಗೊಂದು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಖ್ಯವಾಗಿ ಮಕ್ಕಳಿಗೆ ದಿನ ಪತ್ರಿಕೆಗಳನ್ನು ಓದುವ ಹವ್ಯಾಸಗಳನ್ನು ಬೆಳೆಸಲಾಗುತ್ತದೆ. ಗ್ರಾಪಂ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನೂ ಗ್ರಂಥಾಲಯದ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ.
ಪುಸ್ತಕ ಗೂಡು:
ನರಿಮೊಗರು ಗ್ರಾಪಂ ವ್ಯಾಪ್ತಿಯ ಇನ್ನೊಂದು ವಿಶೇಷತೆಯೆಂದರೆ ನರಿಮೊಗರು ಗ್ರಾಪಂ ವ್ಯಾಪ್ತಿಯ ಶಾಂತಿಗೋಡು ಬಸ್ ನಿಲ್ದಾಣದಲ್ಲಿ ಪುಸ್ತಕ ಗೂಡೊಂದನ್ನು ಶಾಂತಿಗೋಡು ವಿಕ್ರಂ ಯುವಕ ಮಂಡಲದ ಪ್ರಾಯೋಜಕತ್ವದಲ್ಲಿ ನಿರ್ಮಾಣ ಮಾಡಲಾಗಿದೆ. ಬಸ್ ನಿಲ್ದಾಣದಲ್ಲಿ ಬಸ್, ಇನ್ನಿತರ ವಾಹನಗಳಿಗೆ ಕಾಯುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ಪುಸ್ತಕ ಗೂಡನ್ನು ತೆರೆದಿದ್ದು, ಇಲ್ಲಿ ಸುಮಾರು 200ರಷ್ಟು ಪುಸ್ತಕಗಳಿವೆ. ಪ್ರಯಾಣಿಕರು, ಸ್ಥಳೀಯರು ಸಮಯ ಕಳೆಯಲು ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕಗಳನ್ನು ಓದುವ ರೂಢಿ ಬೆಳೆಸಿಕೊಂಡಿದ್ದಾರೆ.
ವಿಸ್ತರಿಸುವ ಯೋಜನೆ:
ಈ ಗ್ರಂಥಾಲಯವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯಿದೆ. ಈಗ ಇರುವ ಗ್ರಂಥಾಲಯದ ಮೇಲಿನ ಭಾಗದಲ್ಲಿ ಶೀಟ್ ಅಳವಡಿಕೆ ಮಾಡಲಾಗುವುದು. ಕೆಳಗಡೆ ಪುಸ್ತಕಗಳನ್ನು ಜೋಡಣೆ ಮಾಡಲಾಗುವುದು. ಮೇಲಿನ ಅಂತಸ್ತಿನಲ್ಲಿ ಪುಸ್ತಕಗಳನ್ನು ಓದಲು ವ್ಯವಸ್ಥೆ ಮಾಡುವ ಕುರಿತು ಆಲೋಚಿಸಲಾಗುತ್ತಿದೆ. ಮುಂದೆ ಸರಕಾರದಿಂದ ಅನುದಾನದ ದೊರೆತರೆ ಈ ವ್ಯವಸ್ಥೆಗಳನ್ನು ಹೊಂದಿಸಿಕೊಳ್ಳಲಾಗುವುದು.
-ವರುಣ್ ಕುಮಾರ್, ಗ್ರಂಥಾಲಯ ಮೇಲ್ವಿಚಾರಕ, ನರಿಮೊಗರು ಗ್ರಾ.ಪಂ.