ಪುತ್ತೂರು: ಕಾಲು ಜಾರಿ ವ್ಯಕ್ತಿಯೋರ್ವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಅಕ್ಟೋಬರ್ 21ರಂದು ಅರಿಯಡ್ಕ ಗ್ರಾಮದ ಬೈರಮೂಲೆ ಎಂಬಲ್ಲಿ ನಡೆದಿದೆ.
ಮೃತರನ್ನು ಬೈರಮೂಲೆ ಕನ್ನ ಪಾಟಾಳಿ ಅವರ ಪುತ್ರ ಶಿವಪ್ರಸಾದ್ (40 ವ.) ಎಂದು ಗುರುತಿಸಲಾಗಿದೆ.
ಕುರಿಂಜ ಹೊಸಮನೆಯಲ್ಲಿ ಚಂದ್ರಶೇಖರ ಮಣಿಯಾಣಿ ಎಂಬವರ ತೋಟದಲ್ಲಿ ಮಿಷನ್ ಮೂಲಕ ಹುಲ್ಲು ತೆಗೆಯುತ್ತಿದ್ದರು. ಕೈಕಾಲು ತೊಳೆಯಲು ಕೆರೆಗೆ ಇಳಿದಿದ್ದು, ಆಯ ತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿರಬೇಕು ಎಂದು ಹೇಳಲಾಗಿದೆ. ಪುತ್ತೂರು ಅಗ್ನಿ ಶಾಮಕ ದಳದವರು ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಪಂಚಾಯತ್ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ತಂದೆ ಕಣ್ಣ ಪಾಟಾಳಿ, ತಾಯಿ ಸಿದ್ದಮ್ಮ, ಪತ್ನಿ ರಾಧಿಕಾ, ಪುತ್ರಿ ಆರಾಧ್ಯ, ಸಹೋದರ ಸುಬ್ಬಪ್ಪ ಪಾಟಾಳಿ, ಸಹೋದರಿಯರಾದ ವೇದಾವತಿ, ಪುಷ್ಪಾವತಿ ಮತ್ತು ರಾಜೀವಿ ಅವರನ್ನು ಅಗಲಿದ್ದಾರೆ.