ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನದಲ್ಲಿ ಆರ್ಟಿಸಾನ್ ಕಾರ್ಡ್ ಗಾಗಿ ಪ್ರಾತ್ಯಕ್ಷಿಕೆ ಪರೀಕ್ಷೆ

ಪಡುಕುತ್ಯಾರು: ಕರ ಕುಶಲ ಕಲೆ ಅಭಿವೃದ್ಧಿ ಇಲಾಖೆಯಿಂದ ಕೇಂದ್ರ ಸರಕಾರದ ಸವಲತ್ತುಗಳನ್ನು ಪಡೆಯಲು ಆರ್ಟಿಸಾನ್ ಕಾರ್ಡ್ ಅತೀ ಅಗತ್ಯವಾಗಿದ್ದು, ಕುಶಲಕರ್ಮಿಗಳ ಹೆಸರಿನಲ್ಲಿ ಹಲವಾರು ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ಅವುಗಳ ವಸ್ತುನಿಷ್ಠತೆ, ನಿಖರತೆ ಪರಿಶೀಲಿಸಲು ಇತ್ತೀಚಿನ ದಿನಗಳಿಂದ ಪ್ರಾತ್ಯಕ್ಷಿಕ ಪರೀಕ್ಷೆಗಳನ್ನು ಇಲಾಖೆ ಕೈಗೊಳ್ಳುತ್ತಿದೆ ಎಂದು ಮಂಗಳೂರು ವಿಭಾಗದ ಹ್ಯಾಂಡಿಕ್ರಾಫ್ಟ್ ಸರ್ವೀಸ್ ಸೆಂಟರ್ ಸಹಾಯಕ ನಿರ್ದೇಶಕಿ ವೀಣಾ ಹೇಳಿದರು.
ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಸತ್ಸಂಗ ಮಂದಿರದಲ್ಲಿ ಆರ್ಟಿಸಾನ್ ಕಾರ್ಡ್ ಗಾಗಿ ನಡೆದ ವೃತ್ತಿ ಕೌಶಲ್ಯ ಪ್ರಾತ್ಯಕ್ಷಿಕ ಪರೀಕ್ಷೆಗೆ ಹಾಜರಾದ ಕುಶಲಕರ್ಮಿಗಳ ಸಭೆಯಲ್ಲಿ ಮಾತನಾಡಿ, ಆರ್ಟಿಸಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಿಕೆ ಮತ್ತು ಅವುಗಳ ಉಪಯೋಗಗಳ ಕುರಿತು ವಿವರವಾದ ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಲಘು ಯೋಗ ಭಾರತಿ ಮತ್ತು ಐಎಂಎಸ್ ಫೌಂಡೇಶನ್ ಪದಾಧಿಕಾರಿ, ಅಸೆಟ್ ಸಲಹಾ ಮಂಡಳಿಯ ರಾಜೇಶ್ ಚಿಂಚೆವಾಡಿ ಮಾತನಾಡಿ, ಬೆಂಗಳೂರಿನಲ್ಲಿರುವ ಕೇಂದ್ರ ಸರ್ಕಾರದ ಎಂಎಸ್ಎಂಇ ಇಲಾಖೆಯ ಮೂಲಕ ಪಿ.ಎಂ. ವಿಶ್ವಕರ್ಮ ಯೋಜನೆ ಹಾಗೂ ಟೆಕ್ಸ್ ಟೈಲ್ಸ್ ಇಲಾಖೆಯ ಮೂಲಕ ಕರಕುಶಲ ಅಭಿವೃದ್ಧಿಗಾಗಿ ಅಗತ್ಯ ಇರುವ ಆರ್ಟಿಸಾನ್ ಕಾರ್ಡ್ ಗಳನ್ನು ಕರಕುಶಲಕರ್ಮಿಗಳಿಗೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು. ಕೇಂದ್ರ ಸರ್ಕಾರದ ಯೋಜನೆಗಳನ್ನು ಅರ್ಹಜನರಿಗೆ ತಲುಪಿಸುವ ನಿಟ್ಟಿನಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕ ಮತ್ತು ಐಎಂಎಸ್ ಫೌಂಡೇಶನ್ ವಿವಿಧ ಕಾರ್ಯಾಗಾರಗಳನ್ನು ನಡೆಸುತ್ತಿದೆ ಎಂದು ಹೇಳಿದರು.

ಕರಕುಶಲ ಕರ್ಮಿಗಳು ಅವರ ಕ್ಲಸ್ಟರ್ ಮುಖಾಂತರ ಸರ್ಕಾರದ ಸವಲತ್ತುಗಳನ್ನು ಸುಲಭದಲ್ಲಿ ಪಡೆಯಬಹುದಾಗಿದೆ. ಯಂತ್ರೋಪಕರಣಗಳ ಸಹಾಯವಿಲ್ಲದೆ ಕೈಗಳಿಂದ ತಯಾರಿಸುವ ಕರಕುಶಲ ವಸ್ತುಗಳ ತಯಾರಕರು ಈ ವಿಭಾಗಕ್ಕೆ ಸೇರುತ್ತಾರೆ. ಇಲ್ಲಿ ನುರಿತ ಕೆಲಸಗಳಲ್ಲಿ ವಿಶೇಷ ಪ್ರಶಸ್ತಿ ಗಳಿಸಿದವರಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಆರ್ಟಿಸಾನ್ ಕಾರ್ಡ್ ಹೊಂದಿದವರು ಕೇಂದ್ರ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಮೊದಲ ಪ್ರಾಶಸ್ಯ ಹೊಂದಿರುತ್ತಾರೆ. ವಿವಿಧ ಉಪಕರಣಗಳ ಸಹಿತವಾದ ಟೂಲ್ ಕಿಟ್, ಸೈ ಫಂಡ್, ಅನುದಾನಗಳು, ಬ್ಯಾಂಕ್ ಸಾಲಗಳು (ರೂಪಾಯಿ 50,000 ಕ್ಕಿಂತ ಮೇಲ್ಪಟ್ಟು-20 ಶೇಕಡಾ ರಿಯಾಯಿತಿಗಳು) ಆಯ್ದ ವಿಭಾಗಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತರಿಗೆ ಮಾಸಿಕ ಪಿಂಚಣಿ (ರೂ. 5,000/- ಮೇಲ್ಪಟ್ಟು) ವಸ್ತು ಪ್ರದರ್ಶನಕ್ಕೆ ಇರುವ ಪ್ರಯಾಣ ಭತ್ಯೆ ವೆಚ್ಚಗಳು, ವಿವಿಧ ಕೌಶಲ್ಯ ಆಧಾರಿತ ತರಬೇತಿ ತರಗತಿಗಳು ಮುಂತಾದ ವಿವಿಧ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಪುರಾತನ ಶೈಲಿಯ ಕರಕುಶಲ ವಸ್ತುಗಳ ನಿರ್ಮಾಣಕ್ಕೆ ಆದ್ಯತೆಯಿದೆ. ಚಿನ್ನ ಬೆಳ್ಳಿ, ಕಂಚು ಹಿತ್ತಾಳೆಗಳ ಎರಕ, ಕಬ್ಬಿಣ, ಕಾಷ್ಟ, ಶಿಲಾ ಶಿಲ್ಪ ಇವುಗಳ ಪಾರಂಪರಿಕ ಪುರಾತನ ಶೈಲಿಯ ಕಲೆಗಳು, ನಶಿಸಿ ಹೋಗುತ್ತಿರುವ ಪುರಾತನ ಕರಕುಶಲ ಕಲೆಗಳು ಇವುಗಳನ್ನು ಉಳಿಸುವ ಕೇಂದ್ರ ಸರಕಾರದ ಯೋಜನೆಗಳ ಸವಲತ್ತು ಗಳನ್ನ ಪಡೆಯಲು ಪ್ರಸ್ತುತ ಆರ್ಟಿಸಾನ್ ಕಾರ್ಡ್ ಉಪಯೋಗವಾಗಲಿದೆ ಎಂದು ಅವರು ವಿವರಣೆ ನೀಡಿದರು.































 
 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ವಡೇರಹೋಬಳಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಸವಲತ್ತುಗಳನ್ನು ಪಡೆಯಲು ಆಸಕ್ತಿ ವಹಿಸಿ ಆರ್ಟಿಸಾನ್ ಕಾರ್ಡ್ ಮೂಲಕ ಪ್ರಯೋಜನವನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು. ಕೇಂದ್ರ, ರಾಜ್ಯ ಸರಕಾರಗಳ ಚಿಕ್ಕ ಸವಲತ್ತಾದರೂ ಅದನ್ನು ಪಡೆದು ಅಳವಡಿಸಿಕೊಂಡು ಕಾರ್ಯಗತಗೊಳಿಸಿದಲ್ಲಿ ದೊಡ್ಡ ರೀತಿಯ ಯೋಜನೆಗಳು ನಮಗೆ ದೊರೆಯಲು ಸಾಧ್ಯವಿದೆ. ಆ ಮೂಲಕ ನಮ್ಮ ಸಮಾಜದ ಅಭಿವೃದ್ಧಿ ಕೂಡ ಆಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ 60 ಕರಕುಶಲಕರ್ಮಿಗಳ ವೃತ್ತಿ ಕೌಶಲ್ಯ ಪ್ರಾತ್ಯಕ್ಷಿಕ ಪರೀಕ್ಷೆ ನಡೆಯಿತು. ಕರಕುಶಲ ಇಲಾಖೆಯ ದೀಪಕ್, ಇಲಾಖೆಯ ಸಹ ಸಂಯೋಜಕ ಗಣೇಶ್ ಆಚಾರ್ಯ ಕೋಟ, ಆನೆಗುಂದಿ ಗುರು ಸೇವಾ ಪರಿಷತ್ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಅಸೆಟ್ ಪ್ರಧಾನ ಕಾರ್ಯದರ್ಶಿ ಗುರುರಾಜ್ ಕೆ ಜೆ ಮಂಗಳೂರು, ಶಿಲ್ಪಿ ಗಣಪತಿ ಆಚಾರ್ಯ ಶಂಕರಪುರ, ಜನಾರ್ಧನ ಆಚಾರ್ಯ ಕನ್ಯಾನ, ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷ ಸೂರ್ಯ ಕುಮಾರ್ ಹಳೆಯಂಗಡಿ, ಗೋವು ಪರ್ಯಾವರಣ್ ಟ್ರಸ್ಟ್ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಮುಂತಾದವರು ಉಪಸ್ಥಿತರಿದ್ದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ದಿನೇಶ್ ಆಚಾರ್ಯ ಪಡುಬಿದ್ರಿ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top