ಮುಂಬಯಿ: ಕೈಂ ಬ್ರಾಂಚ್‌ನ ಬಾಂದ್ರಾ 9ರ ಘಟಕದ ಅಧಿಕಾರಿಗಳ ತಂಡದ ಸೀನಿಯರ್ ಇನ್ಸ್‌ಪೆಕ್ಟರ್ ದಯಾ ನಾಯಕ್ ಅವರ ನೇತೃತ್ವದಲ್ಲಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 16 ಕೋಟಿ ರೂ. ಮೌಲ್ಯದ 5.089 ಕೆಜಿ ಎಂಡಿ (ಮೆಫೆಡೋನ್) ಡ್ರಗ್ಸ್‌ನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದೆ. ಖಾರ್ ಪಶ್ಚಿಮದ ಖಾರ್ದಂಡದ ಕಾರ್ಟರ್ ರೋಡ್‌ನ ಖಲಾ ಮೈದಾನ ಸಮೀಪದ ಸ್ಮಶಾನದ ಬಳಿ ಈ ಕಾರ್ಯಾಚರಣೆ ನಡೆಸಲಾಯಿತು.
ಬಂಧಿತ ಆರೋಪಿಗಳನ್ನು ರಾಹುಲ್ ಕಿಸಾನ್ ಗವಾಲಿ ಮತ್ತು ಅತುಲ್ ಕಿಸಾನ್ ಗವಾಲಿ (32) ಎಂದು ಗುರುತಿಸಲಾಗಿದ್ದು, ಅವರು ಉತ್ತರ ಸೋಲಾಪುರ ಜಿಲ್ಲೆಯ ಶಿವಾಜಿ ನಗರದ ಬಾಳೆ ತಾಲೂಕ್ ನಿವಾಸಿಗಳು ಎಂದು ದಯಾ ನಾಯಕ್ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಬಂಧಿತರ ಬಳಿ ಒಟ್ಟು 5.089 ಕೆ.ಜಿ (ಒಬ್ಬ ಆರೋಪಿ 2.547 ಕೆ.ಜಿ ಮತ್ತು ಇತರ ಆರೋಪಿ 2.542 ಕೆ.ಜಿ) ಎಂಡಿ ಪತ್ತೆಯಾಗಿದೆ. ಖಾರ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದ್ದು, ಅನುಮತಿಯೊಂದಿಗೆ ತನಿಖೆಯನ್ನು ಘಟಕ 9 ರವರು ವಹಿಸಿಕೊಂಡಿದ್ದಾಗಿ ದಯಾ ನಾಯಕ್ ತಿಳಿಸಿದ್ದಾರೆ.
ತನಿಖೆಯ ವೇಳೆ ಆರೋಪಿಗಳು ಸೋಲಾಪುರದಲ್ಲಿ ಎಂಡಿ ಔಷಧ ಉತ್ಪಾದಿಸುವ ಕಾರ್ಖಾನೆಯನ್ನು ಹೊಂದಿರುವುದಾಗಿ ಒಪ್ಪಿಕೊಂಡಿದ್ದು, ಅದರಂತೆ ಕಾರ್ಖಾನೆ ಮೇಲೆ ದಾಳಿ ನಡೆಸಿ, 3.010 ಕೆಜಿ ಎಂಡಿ ಹಾಗೂ ಎಂಡಿ ಉತ್ಪಾದಿಸಲು ಅಗತ್ಯವಾದ 100 ಕೋಟಿಗೂ ಹೆಚ್ಚು ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಕಾರ್ಖಾನೆಯನ್ನು ಮುಚ್ಚಲಾಗಿದೆ. ಬಂಧಿತ ಆರೋಪಿಗಳನ್ನು ಅ. 19ರ ವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.