ವಿಟ್ಲ: ಚಲನಚಿತ್ರ ನಟಿ ರಾಧಿಕಾ ಅವರ ಅಮ್ಟೂರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಾದನಗಿರಿ ನಿವಾಸಿ ಮಹಾದೇವ ಮಾರಿಪಟಗಾರ್ ಅವರ ಪತ್ನಿ ನಾಗರತ್ನ (33) ಕಾಣೆಯಾದ ಮಹಿಳೆ. ತಾಲೂಕಿನ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಎಂಬಲ್ಲಿ ಚಲನ ಚಿತ್ರ ನಟಿ ರಾಧಿಕ ಅವರ ಎಸ್ಟೇಟ್ ನಲ್ಲಿ ಕಳೆದ ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ನಾಗರತ್ನ ಇದೀಗ ಕಾಣೆಯಾಗಿದ್ದಾರೆ. ನಾಗರತ್ನ ಅವರ ಪತಿ ಮಹಾದೇವ ಮಾರಿಪಟಗಾರ್ ಅವರ ಜೊತೆಯಲ್ಲಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು.
ಅ. 13ರಂದು ಗಂಡ ಹೆಂಡತಿ ಇಬ್ಬರು ಎಸ್ಟೇಟ್ ನಲ್ಲಿ ಕೆಲಸಕ್ಕೆಹೋಗಿದ್ದು, ಅ ದಿನ ಬೆಳಿಗ್ಗೆ 10.30ರ ವೇಳೆಗೆ ಎಸ್ಟೇಟ್ ನಲ್ಲಿರುವ ಮನೆಗೆ ಚಾ ಕುಡಿಯಲು ಹೋಗಿ ಬರುತ್ತೇನೆ ಎಂದು ಹೋದವರು ಮತ್ತೆ ಕೆಲಸದ ಕಡೆ ಬಂದಿಲ್ಲ. ಚಹಾ ಕುಡಿಯಲು ಹೋದವಳು ಯಾಕೆ ಬಂದಿಲ್ಲ ಎಂದು ಮನೆ ಕಡೆ ಹೋಗಿ ನೋಡಿದಾಗ ಆಕೆ ಮನೆಯಲ್ಲಿರದೆ ಕಾಣೆಯಾಗಿದ್ದಳು. ಮನೆಯಿಂದ ಆಕೆ ಬಟ್ಟೆ , ಆಧಾರ್ ಕಾರ್ಡ್, ನಗದು ತೆಗೆದುಕೊಂಡು ಹೋಗಿರುವ ವಿಚಾರ ಗಮನಕ್ಕೆ ಬಂದಿದೆ.
ಅವರು ಹಿಂದೆ ಗಂಡನ ಜೊತೆ ಮುನಿಸಿಕೊಂಡು ಧರ್ಮಸ್ಥಳ, ಮಂಗಳೂರು ಕಡೆ ಹೋಗಿ ತಿರುಗಾಡಿಕೊಂಡು ವಾಪಸು ಬರುತ್ತಿದ್ದರು. ಇದು ಅದೇ ರೀತಿ ಹೋಗಿರಬಹುದು ಅಂದುಕೊಂಡಿದ್ದ ಗಂಡನಿಗೆ ಅ.14ರಂದು ಮರುದಿನ ಪೋನ್ ಮಾಡಿದ ಮಹಿಳೆ, ತನ್ನನ್ನು ಹುಡುಕಬೇಡಿ ತಾನು ದೂರ ಹೋಗುತ್ತೇನೆಂದು ತಿಳಿಸಿದ್ದಾರೆ. ಇದೀಗ ಮೊಬೈಲ್ ನಂ. ಸ್ವಿಚ್ ಆಪ್ ಆಗಿದ್ದು, ನಾಪತ್ತೆಯಾಗಿದ್ದಾರೆ ಎಂದು ಗಂಡ ದೂರು ನೀಡಿದ್ದಾರೆ. ಈಕೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಂಟ್ವಾಳ ನಗರ ಪೋಲೀಸ್ ಠಾಣೆಯನ್ನು ಸಂಪರ್ಕ ಮಾಡುವಂತೆ ತಿಳಿಸಿದ್ದಾರೆ.