ಕರ್ತವ್ಯಕ್ಕೆ ಅಡ್ಡಿ: ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು

ಪುತ್ತೂರು: ಕರ್ತವ್ಯನಿರತ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವರ್ತನೆಗೆ ಪುತ್ತೂರು ತಾಲೂಕು ರಾಜ್ಯ ಸರಕಾರಿ ನೌಕರರ ಸಂಘ ಖಂಡನೆ ವ್ಯಕ್ತಪಡಿಸಿದ್ದು, ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರಿಗೆ ದೂರು ನೀಡಿದೆ.

ಅ. 7ರಿಂದ 9ರವರೆಗೆ ಬೆಳ್ತಂಗಡಿ ತಾಲೂಕು ಕೊಕ್ಕಡ ಹೋಬಳಿಯ ಕಳೆಂಜ ಗ್ರಾಮದ ಸರ್ವೆ ನಂಬ್ರ 309ರಲ್ಲಿರುವ ಅಮ್ಮಿನಡ್ಕದ ನಿಡ್ಲೆ ವಿಸ್ಕೃತ ಬ್ಲಾಕ್-2ರ ಮೀಸಲು ಅರಣ್ಯದಲ್ಲಿ 1963ನೇ ಕರ್ನಾಟಕ ಜಾಗವನ್ನು ಕಳೆಂಜ ಗ್ರಾಮ ಅಮ್ಮಿನಡ್ಕ ನಿವಾಸಿ ಲೋಲಾಕ್ಷ ಗೌಡ ಎಂಬವರು ಹಸನು ಮಾಡಿ ಕಟ್ಟಡ ನಿರ್ಮಾಣಕ್ಕೆ ಅಕ್ರಮವಾಗಿ ಅಡಿಪಾಯ ಹಾಕಿದ್ದರು. ಈ ಅತಿಕ್ರಮಣವನ್ನು ತೆರವುಗೊಳಿಸಲು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಹಾಗೂ ಸಿಬ್ಬಂದಿ ವರ್ಗ ವಿಚಾರಣೆ ನಡೆಸುತ್ತಿರುವಾಗ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಮೀಸಲು ಅರಣ್ಯ ಸ್ಥಳಕ್ಕೆ ಏಕಾಏಕಿಯಾಗಿ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರವರಿಗೆ ಅರಣ್ಯ ಅತಿಕ್ರಮಣದ ಬಗ್ಗೆ ಅರಣ್ಯ ಅಧಿಕಾರಿಗಳು ಸವಿಸ್ತಾರವಾಗಿ ತಿಳಿಸಲಾಗಿದ್ದು, ಪ್ರಕರಣದ ವಾಸ್ತವ ಸ್ಥಿತಿಯನ್ನು ಶಾಸಕರು ಅರಿತಿದ್ದರೂ ಸಹ ಏಕಾಏಕಿ ಶಾಸಕ ಹರೀಶ್ ಪೂಂಜಾರವರು ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕುವ ಮೂಲಕ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಮಾತ್ರವಲ್ಲ ಶಾಸಕ ಹರೀಶ್ ಪೂಂಜಾರವರು ಪದೇ ಪದೇ ದೂರವಾಣಿ ಕರೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಒತ್ತಡ ಹೇರಿರುತ್ತಾರೆ. ಮಾತ್ರವಲ್ಲ, ಸಾರ್ವಜನಿಕವಾಗಿ ಅರಣ್ಯ ಸಿಬ್ಬಂದಿಗಳ ಮೇಲೆ ಸುಳ್ಳು ಆರೋಪ ಹೊರಿಸಿ ಮಾನ ಹಾನಿ ಮಾಡಿರುತ್ತಾರೆ. ಅಲ್ಲದೆ ಅರಣ್ಯ ಇಲಾಖೆ ಮತ್ತು ಅರಣ್ಯ ಸಿಬ್ಬಂದಿಗಳ ಬಗ್ಗೆ ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡಿ ಅರಣ್ಯ ಇಲಾಖೆ ಮೇಲೆ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಅರಣ್ಯ ಅತಿಕ್ರಮಣ ತಡೆಯಲು ಬಂದಿದ್ದ ಬೇರೆ ತಾಲೂಕುಗಳ ಅರಣ್ಯ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಬೆದರಿಕೆ ಒಡ್ಡಿರುತ್ತಾರೆ ಎಂದು ಆರೋಪಿಸಿರುವ ಸಂಘ, ತಪ್ಪಿತಸ್ಥ ಶಾಸಕ ಹರೀಶ್ ಪೂಂಜಾ ಹಾಗೂ ಮತ್ತಿತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮತ್ತು ಅರಣ್ಯ ಇಲಾಖೆಯ ಕರ್ತವ್ಯವನ್ನು ನಿರ್ಭಯವಾಗಿ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಆಚಾರ್ಯ, ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ ಬಿ., ಹಿರಿಯ ಉಪಾಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಗೌರವಾಧ್ಯಕ್ಷ ರಾಮಚಂದ್ರ, ಉಪ ವಲಯ ಅರಣ್ಯಾಧಿಕಾರಿಗಳಾದ ಅಶೋಕ್, ಜೆರಾಲ್ಡ್ ಡಿ’ಸೋಜಾ, ಬೀಟ್ ಫಾರೆಸ್ಟರ್ ಜಗದೀಶ್, ಉಪತಹಶೀಲ್ದಾರ್ ಸುಲೋಚನಾ, ಪದ್ಮಾವತಿ, ಕವಿತಾ ಮತ್ತಿತರರು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top