ಪುತ್ತೂರು: ವೃತ್ತಿಯಲ್ಲಿ ಆಟೋ ಚಾಲಕ. ಪ್ರವೃತ್ತಿಯಲ್ಲಿ ಪ್ರೇತ ವೇಷಧಾರಿ. ಇದು ದಿವಾಕರ ದೇವಾಡಿಗ ಅವರ ಪ್ರತಿಭೆ.
ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ದಿವಾಕರ ದೇವಾಡಿಗ ಅವರು ಪ್ರತೀ ವರ್ಷ ನವರಾತ್ರಿ ಸಂದರ್ಭದಲ್ಲಿ ಪ್ರೇತದೊಂದಿಗೆ ಬೆರೆತು ಮಾತನಾಡುತ್ತಾರೆ.
ಕಳೆದ 12 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ನಿಷ್ಠೆಯಿಂದ ವೇಷ ಧರಿಸುತ್ತಾರೆ. ಶುರುವಿನ ವರ್ಷದಲ್ಲಿ ಕೃಷ್ಣ, ರಾಮ ಹೀಗೆ ನಾನಾ ವಿಧದ ವೇಷ ಧರಿಸುತ್ತಿದ್ದರು. ಇತ್ತೀಚಿನ ಆರು ವರ್ಷಗಳಿಂದ ಪ್ರೇತ ವೇಷ ಧರಿಸಿ ಜನಮಾನಸದಲ್ಲಿ ಅಚ್ಚಾಗಿದ್ದಾರೆ.
ನವರಾತ್ರಿ ಬಂತೆಂದರೆ ಸಾಕು. 9 ದಿನ ಉಪವಾಸ ಕೈಗೊಳ್ಳುತ್ತಾರೆ. ಬೆಳಗ್ಗಿನ ಒಂದು ಹೊತ್ತಿನ ಊಟ. ಮತ್ತೆ ವೇಷ ಧರಿಸಿ ತಿರುಗಾಟ. ರಾತ್ರಿ ಫಲಹಾರ ಸೇವಿಸುತ್ತಾರೆ. ಈ ಸಂದರ್ಭದಲ್ಲಿ ಮಾಂಸಾಹಾರ ತ್ಯಜಿಸುತ್ತಾರೆ. ಮತ್ತೊಂದು ವಿಶೇಷತೆಯೆಂದರೆ ವೇಷ ಧರಿಸಿ ಹಣ ಕೇಳುವುದಿಲ್ಲ. ಕೊಟ್ಟರೆ ತೆಗೆದುಕೊಳ್ಳುತ್ತಾರೆ.
ವೇಷ ಧರಿಸಿ ಕಟ್ಟಡಗಳ ಕುಂದ, ಮರ ಹೀಗೆ ಎಲ್ಲೆಂದರಲ್ಲಿ ನಿಂತು ಫೋಸ್ ನೀಡುತ್ತಾರೆ. ಹೊತ್ತೇರುವ ಮೊದಲೇ ವೇಷ ತೆಗೆಯುತ್ತಾರೆ. ಮತ್ತೆ ಮರುದಿನ ಬೆಳಿಗ್ಗೆ ವೇಷ ಧರಿಸುವುದು. ರಾತ್ರಿ ಹೊತ್ತಿನಲ್ಲಿ ಈ ವೇಷ ಧರಿಸಿ ಹೋದರೆ ಮಕ್ಕಳು ಹೆದರುತ್ತಾರೆ ಎಂಬ ಕಾರಣಕ್ಕೆ ಹೊತ್ತೇರುವ ಮೊದಲೇ ವೇಷ ತೆಗೆಯುತ್ತೇನೆ ಎಂದು ಅವರು ತಿಳಿಸಿದ್ದಾರೆ.