ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ನೀಡಲ್ಪಡುವ ಎನ್ನೆಸ್ಸೆಸ್ಸ್ 2021-22ನೇ ಸಾಲಿನ ರಾಜ್ಯ ಪ್ರಶಸ್ತಿ ಮಂಗಳೂರಿನ ಕೆನರಾ ಕಾಲೇಜಿಗೆ ಲಭಿಸಿದೆ.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಸಲ್ಲಿಸಿರುವ ಅನುಪಮ ಸೇವೆಗಾಗಿ 2021-22ನೇ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ರಾಜ್ಯ ಪ್ರಶಸ್ತಿಯನ್ನು ಸಂಸ್ಥೆಯ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಸೀಮಾ ಪ್ರಭು ಎಸ್. ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ನೀಡಲಾಗುವ ಅತ್ಯುತ್ತಮ ಎನ್.ಎಸ್.ಎಸ್ . ಘಟಕ ರಾಜ್ಯ ಪ್ರಶಸ್ತಿ ಗೌರವವನ್ನು ಸಂಸ್ಥೆಯ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಅವರು ಬೆಂಗಳೂರಿನ ರಾಜ್ಯಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಬಿ. ನಾಗೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮೊದಲಾದವರು ಉಪಸ್ಥಿತರಿದ್ದರು.