ಪುತ್ತೂರು: ಡಾ. ಎಪಿಜೆ ಅಬ್ದುಲ್ ಕಲಾಂ ಮಿಸೈಲ್ ಮ್ಯಾನ್ ಪ್ರಶಸ್ತಿಯನ್ನು ಸ್ವೀಕರಿಸಿ ಇನ್ನೂ ಗಂಟೆ ಸರಿದಿರಲಿಲ್ಲ. ಅಷ್ಟರಲ್ಲೇ ಆಪದ್ಭಾಂಧವ ಈಶ್ವರ್ ಮಲ್ಪೆ ಅವರ ಮೊಬೈಲ್’ಗೆ ಕರೆ ಬಂದಾಗಿತ್ತು.
ಪುತ್ತೂರು ತಾಲೂಕಿನ ಮಾಡಾವು ಸಮೀಪದ ಗೌರಿ ಹೊಳೆಯಲ್ಲಿ 17 ವರ್ಷದ ನವತರುಣ ತಸ್ಲೀಮ್ ಎಂಬ ಯುವಕ ನಾಪತ್ತೆಯಾಗಿದ್ದಾನೆ. ಗೆಳೆಯರ ಜೊತೆ ಈಜಲು ತೆರಳಿದ್ದು, ಇದುವರೆಗೆ ಮರಳಿ ಬಂದಿಲ್ಲ. ನೀರಿನ ಸೆಳೆತ ಹೆಚ್ಚಿರುವುದರಿಂದ ಅಪಾಯ ಸಂಭವಿಸಿರುವ ಸಾಧ್ಯತೆಯೇ ಅಧಿಕ. ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ ಎಂಬ ಸಂದೇಶ ಬಂದಾಗಿತ್ತು.
ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಇನ್ನೂ ನಡೆಯುತ್ತಿತ್ತು. ಪ್ರಶಸ್ತಿ ಸ್ವೀಕರಿಸಿ ತಾಸು ಆಗಿರಲಿಲ್ಲ. ಅಭಿಮಾನಿಗಳ ಶುಭಾಶಯ ಹರಿದು ಬರುತ್ತಿತ್ತು. ಆದರೆ ಈಶ್ವರ್ ಮಲ್ಪೆ ಅವರಿಗೆ ಬಂದಿದ್ದ ಕರೆಯ ಹಿಂದಿದ್ದ ನೋವು ಮನಸ್ಸಿಗೆ ತಟ್ಟಿತ್ತು.
ವೇದಿಕೆಯಿಂದ ನೇರವಾಗಿ ಕೆಳಗಿಳಿದ ಈಶ್ವರ್ ಮಲ್ಪೆ ಅವರು ಕರಾವಳಿಯತ್ತ ಮುಖ ಮಾಡಿದರು. ಇನ್ನೊಂದೆಡೆ, ತಮ್ಮ ಆಂಬುಲೆನ್ಸ್ ಅನ್ನು ಮಲ್ಪೆಯಿಂದ ಉಪ್ಪಿನಂಗಡಿಗೆ ಬರುವಂತೆ ಸೂಚಿಸಿದರು.
ಉಪ್ಪಿನಂಗಡಿಯಲ್ಲಿ ತಮ್ಮ ಆಂಬುಲೆನ್ಸ್’ಗೆ ಹತ್ತಿದ ಈಶ್ವರ್ ಮಲ್ಪೆ ಅವರು ಇನ್ನೂ ಬೆಳಕು ಹರಿಯುವ ಮುನ್ನವೇ ಮಾಡಾವಿನ ಗೌರಿ ಹೊಳೆ ತಟದಲ್ಲಿದ್ದರು. ಹೊಳೆಗೆ ಹಾರಿದವರೇ ತಸ್ಲೀಮ್ ಮೃತದೇಹಕ್ಕಾಗಿ ಹುಡುಕಾಟ ನಡೆಸಿದರು. ಸುಮಾರು 6.30ರ ಹೊತ್ತಿಗೆ ಮೃತದೇಹ ಲಭಿಸಿತ್ತು. ನೇರವಾಗಿ ದಡಕ್ಕೆ ತಂದು ಬಿಟ್ಟರು.
ಹೊಳೆಯಲ್ಲಿ ಹೆಚ್ಚಿದ್ದ ನೀರಿನ ಸೆಳೆತ ಸ್ಥಳೀಯರನ್ನು ಧಿಕ್ಕುಗೆಡಿಸಿತ್ತು. ಮೃತದೇಹವನ್ನು ಹುಡುಕಾಡಲೂ ಅಡ್ಡಿ ಮಾಡಿತ್ತು. ಆದ್ದರಿಂದ ಸಾಮಾನ್ಯ ಈಜುಗಾರರಿಗೆ ಮೃತದೇಹ ಹುಡುಕಾಟ ನಡೆಸುವುದು ಕಷ್ಟವೇ ಆಗಿತ್ತು. ಆದ್ದರಿಂದ ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಲಾಗಿತ್ತು. ಸ್ಥಳೀಯರು ನೀಡಿದ ಮಾಹಿತಿಗಳ ಆಧಾರದಲ್ಲಿ ಈಶ್ವರ್ ಮಲ್ಪೆ ಅವರು ನೀರಿನಿಂದ ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು. ಹೊಳೆ ಒಡ್ಡಿದ್ದ ಅಡ್ಡಿಯನ್ನು ಮೀರಿ, ತಸ್ಲೀಂ ಅವರ ಮೃತದೇಹವನ್ನು ಈಶ್ವರ್ ಮಲ್ಪೆ ದಡ ತಲುಪಿಸಿದರು.
ಮೃತದೇಹವನ್ನು ತಮ್ಮದೇ ಆಂಬುಲೆನ್ಸ್’ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ತಲುಪಿಸಿದರು ಈಶ್ವರ್ ಮಲ್ಪೆ. ಬೆಂಗಳೂರಿನಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂ ಮಿಸೈಲ್ ಮ್ಯಾನ್ ಪ್ರಶಸ್ತಿ ಸ್ವೀಕರಿಸಿ ಹಿಂದಿರುಗಿದ ಈಶ್ವರ್ ಮಲ್ಪೆ ಅವರ ಸೇವಾ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.