ಪುತ್ತೂರು: ಸರಕಾರ ಕೆಲಸ ದೇವರ ಕೆಲಸ. ಈ ನಿಟ್ಟಿನಲ್ಲಿ ಸರಕಾರಿ ಕಚೇರಿ ಯಾವುದೇ ಇರಲಿ ಸಿಬ್ಬಂದಿಗಳ ಕೊರತೆ ಇದೆ ಎಂಬ ನೆಪ ಬಿಟ್ಟು ಇರುವ ಸಿಬ್ಬಂದಿಗಳನ್ನು ಹೆಚ್ಚು ಬಳಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ 9 ಲಕ್ಷ ರೂ. ವೆಚ್ಚದಲ್ಲಿ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಹಾಗೂ ಮಕ್ಕಳ ಚಿಕಿತ್ಸಾ ವಿಭಾಗಗಕ್ಕೆ ಮಲ್ಪಿ ಪ್ಯಾರಾ ಮಾನಿಟರ್, ಹೊರಪ್ರಾಂಗಣದ ನಿರೀಕ್ಷಣಾ ಕೊಠಡಿಗೆ ಟೆಲಿವಿಷನ್ ಕೊಡುಗೆಯಾಗಿ ನೀಡಿದ್ದು, ಇದರ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಾಜಕ್ಕಾಗಿ ಸಮಯ ಇಡುವವರು ಕಡಿಮೆ. ಅದಕ್ಕೆ ಹೊರತು ಎಂಬಂತೆ ಕಟ್ಟಕಡೆಯ ವ್ಯಕ್ತಿಗೂ ಸ್ಪಂದನೆ ನೀಡುವ ಕೆಲಸ ರೆಡ್ ಕ್ರಾಸ್ ಸಂಸ್ಥೆಯಿಂದ ಆಗುತ್ತಿದೆ ಎಂದ ಅವರು, ದ.ಕ. ಜಿಲ್ಲೆಯಲ್ಲಿ ಪುತ್ತೂರು ಆಸ್ಪತ್ರೆ ಕಾರ್ಯ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಆಸ್ಪತ್ರೆ ಕಾರ್ಯ ಇನ್ನಷ್ಟು ವೇಗ ಪಡೆಯಬೇಕು. ಯಾವುದೇ ರೋಗಿಗಳು ಕಾಯುವ ಪರಿಸ್ಥಿತಿ ಬರಬಾರದು ಎಂದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಮಾತನಾಡಿ, ಈಗಾಗಲೇ ಡಯಾಲಿಸಿಸ್ ಕೇಂದ್ರದಲ್ಲಿ 10 ಮೆಷಿನ್ ಕಾರ್ಯಾಚರಿಸುತ್ತಿದೆ. ಹಿಂದೆ 5 ಮೆಷಿನ್ ಕಾರ್ಯಾಚರಿಸುತ್ತಿದ್ದ ಸಂದರ್ಭ 50 ರೋಗಿಗಳು ವೈಟಿಂಗ್ ಲಿಸ್ಟ್ ನಲ್ಲಿದ್ದರು. ಇದೀಗ ದಿನಕ್ಕೆ 90ರಿಂದ 100 ರೋಗಿಗಳಿಗೆ ಡಯಾಲಿಸಿಸ್ ನಡೆಯುತ್ತಿದೆ. 30 ಮಂದಿ ವೈಟಿಂಗ್ ಲಿಸ್ಟ್ ನಲ್ಲಿದ್ದಾರೆ ಎಂದ ಅವರು, ಸರಕಾರಿ ಆಸ್ಪತ್ರೆಗೆ ಇಬ್ಬರು ಸ್ಪೆಷಲಿಸ್ಟ್ ಗಳ ಅಗತ್ಯತೆಯಿದೆ. ರಜೆ ಸಂದರ್ಭ ಕಷ್ಟ ಆಗುತ್ತದೆ. ಅಲ್ಲದೆ ಹೆಚ್ಚುವರಿ 50 ಬೆಡ್ ಅವಶ್ಯಕತೆಯಿದೆ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸಂತೋಷ್ ಎಸ್. ಶೆಟ್ಟಿ, ಸರಕಾರಿ ಆಸ್ಪತ್ರೆಯ ಮೂಲಕ ರೆಡ್ ಕ್ರಾಸ್ ಸಂಸ್ಥೆ ಸಮಾಜದ ಜೊತೆ ಸ್ಪಂದಿಸುವಂತಾಗಿದೆ. ದಾನಿಗಳ ಸಹಕಾರ ಇದ್ದರೆ ಮತ್ತಷ್ಟು ಕಾರ್ಯಕ್ರಮಗಳನ್ನು ಜೋಡಿಸಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಆಸ್ಕರ್ ಆನಂದ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಯುನಿಕ್ ಉಪಸ್ಥಿತರಿದ್ದರು. ಉಪಸಭಾಪತಿ ಎ. ಪದ್ಮನಾಭ ಶೆಟ್ಟಿ ಸ್ವಾಗತಿಸಿದರು. ಸಂಯೋಜನಾ ಉಪಸಮಿತಿ ಮುಖ್ಯಸ್ಥ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಕಾರ್ಯಕ್ರಮ ನಿರೂಪಿಸಿದರು.