ಟೆಲ್ ಅವೀವ್: ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕಾರ್ಯಾಚರಣೆ ಅಂಗವಾಗಿ ವಿಶೇಷ ವಿಮಾನದಲ್ಲಿ 274 ಭಾರತೀಯರ 4ನೇ ತಂಡ ಶನಿವಾರ ಇಸ್ರೇಲ್ ನಿಂದ ವಾಪಸ್ಸಾಗಿದೆ.
ಆಪರೇಷನ್ ವಿಜಯ್ ಕಾರ್ಯಾಚರಣೆಯ 4ನೇ ತಂಡ ಇದಾಗಿದ್ದು, ಅ.12ರಂದು ಮೊದಲ ತಂಡ ತಾಯ್ನಾಡಿಗೆ ವಾಪಸ್ಸಾಗಿತ್ತು. 2ನೇ ತಂಡದಲ್ಲಿ 235 ಭಾರತೀಯರು ಮತ್ತು ಮೊದಲ ತಂಡದಲ್ಲಿ 212 ಭಾರತೀಯರು ತಾಯ್ತಾಡಿಗೆ ವಾಪಸ್ಸಾಗಿದ್ದರು.
ಈ ಮಧ್ಯೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಪ್ಯಾಲೆಸ್ತೀನ್ ಅಧ್ಯಕ್ಷ ಮೊಹ್ಮದ್ ಅಬ್ಬಾಸ್ ಅವರ ಜತೆ ಮೊದಲ ಬಾರಿಗೆ ಮಾತುಕತೆ ನಡೆಸಿದ್ದಾರೆ. ಎಲ್ಲ ನಾಗರಿಕರಿಗೆ ನೀರು, ಆಹಾರ ಮತ್ತು ಅಗತ್ಯ ಔಷಧೋಪಚಾರವನ್ನು ವ್ಯವಸ್ಥೆ ಮಾಡುವಂತೆ ಬೈಡನ್, ನೆತನ್ಯಾಹು ಅವರಿಗೆ ಸೂಚನೆ ನೀಡಿದ್ದಾರೆ. ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್, ಗಾಝಾ ಮೇಲೆ ದಾಳಿ ಆರಂಭಿಸಿರುವುದರಿಂದ ಯುದ್ಧ ಪರಿಸ್ಥಿತಿ ತಲೆದೋರಿದೆ. ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಶನಿವಾರ ಇರಾನ್ ನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರನ್ನು ಕತಾರ್ ನಲ್ಲಿ ಭೇಟಿ ಮಾಡಿ, ಇಸ್ರೇಲ್ ಮೇಲೆ ನಡೆಸಿದ ದಾಳಿ ಬಗ್ಗೆ ಚರ್ಚೆ ನಡೆಸಿದರು. ಜತೆಗೆ ಈ ಗುಂಪಿನ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವ ಭರವಸೆಯನ್ನು ಇರಾನ್ ನೀಡಿದೆ ಎಂದು ಹಮಾಸ್ ಹೇಳಿಕೆ ನೀಡಿದೆ.