ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಿನ್ನಲೆಯಲ್ಲಿ ಈಗಾಗಲೇ 25 ಕೋಟಿ ರೂ. ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಇದು ಸರಕಾರದ ಮಟ್ಟದಲ್ಲಿದೆ. 4.66 ಕೋಟಿ ರೂ.ವನ್ನು ಭಕ್ತರಿಂದ ಸಂಗ್ರಹಕ್ಕಾಗಿ ಸರಕಾರ ಒಪ್ಪಿಗೆ ನೀಡಿದೆ. ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಅವರು ಭಾನುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಪುನರುತ್ಥಾನ ಕಾರ್ಯದ ಅಂಗವಾಗಿ ಅನ್ನಛತ್ರ ನಿರ್ಮಾಣ ಮತ್ತು ಪುಷ್ಕರಣಿ ಪುನರುತ್ಥಾನ ನಿಧಿ ಸಂಚಯನದ ಕುರಿತು ಭಕ್ತರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ನಡೆದ ವಿಚಾರಗಳನ್ನು ಕೆದಕಿ ದೊಡ್ಡದು ಮಾಡುವುದಕ್ಕಿಂತ ಭವಿಷ್ಯದ ಅಭಿವೃದ್ಧಿ ಕುರಿತು ಚರ್ಚೆಗಳನ್ನು ಮಾಡೋಣ ಎಂದು ಹೇಳಿದ ಶಾಸಕರು, ಅಭಿವೃದ್ಧಿ ದೃಷ್ಟಿಯಿಂದ ಪ್ರಥಮವಾಗಿ ಸ್ಚಚ್ಛತೆಯ ನಿಟ್ಟಿನಲ್ಲಿ ಚರಂಡಿ ವ್ಯವಸ್ಥೆಗಳನ್ನು ಮಾಡಿಕೊಂಡು ಮುಂದಿನ ಅಭಿವೃದ್ಧಿ ಕಾರ್ಯ ಮಾಡಬೇಕಾಗಿದೆ. ಮುಖ್ಯವಾಗಿ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಯಾತ್ರಾರ್ಥಿಗಳು ಬರುವ ಸಂಖ್ಯೆಯಲ್ಲಿ ಬರಬೇಕು. ಈ ನಿಟ್ಟಿನಲ್ಲಿ ದೇವಸ್ಥಾನದ ಕೆರೆಯ ಸಮೀಪವಿರುವ ಮುಖ್ಯರಸ್ತೆಗೆ ತಾಗಿರುವ ಕಟ್ಟಡಗಳನ್ನು ತೆಗೆಯಬೇಕಾಗಿದೆ. ಈಗಾಗಲೇ ಮಹಿಳಾ ಠಾಣೆಯನ್ನು ಬೇರೆಡೆಗೆ ಶಿಫ್ಟ್ ಮಾಡುವ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಜತೆಗೆ ದೇವಸ್ಥಾನದ ವಠಾರದಲ್ಲಿರುವ ಶಾರದಾ ಭಜನಾ ಮಂದಿರದ ಅಭಿವೃದ್ಧಿಯ ಕುರಿತೂ ಚರ್ಚಿಸಲಾಗಿದೆ. ಯಾತ್ರಿನಿವಾಸಕ್ಕೆ ಸರಕಾರದಿಂದ ಈಗಾಗಲೇ ಅನುಮೋದನೆ ಬಂದಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಒಂದು ಶ್ರದ್ಧಾ ಕೇಂದ್ರಕ್ಕೆ ಭವ್ಯತೆ, ದಿವ್ಯತೆ ಇದ್ದರೆ ಅಲ್ಲಿ ಶ್ರದ್ಧೆ, ಭಕ್ತಿ ಮೂಡುತ್ತದೆ. ಈ ನಿಟ್ಟಿನಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೊಳ್ಳುತ್ತಿದೆ. ಒಟ್ಟಾರೆಯಾಗಿ ಧಾರ್ಮಿಕತೆಯನ್ನು ಜೋಡಿಸುವ ಕೆಲಸ ಆಗಿದೆ ಎಂದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ವ್ಯವಸ್ಥೆ ಇರಬೇಕು. ಇದಕ್ಕಾಗಿ ಮ.ಮ ಪರಿವಾರ ಭಕ್ತರ ಬಳಗ 14 ಕಡೆಗಳಲ್ಲಿ ಇದೆ. 60 ಗುರಿ ಇದೆ. ಶ್ರೀ ದೇವಸ್ಥಾನದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದ ಅವರು, ಈಗಾಗಲೇ ಅನ್ನಛತ್ರಕ್ಕೆ 3.48 ಕೋಟಿ ಅಂದಾಜು ಪಟ್ಟಿ ಸರಕಾರಕ್ಕೆ ಕಳುಹಿಸಲಾಗಿದೆ. ಇದನ್ನು ಐದು ಕೋಟಿ ಏರಿಸುವ ವ್ಯವಸ್ಥೆ ಮಾಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಧಾರ್ಮಿಕ ಮುಂದಾಳು ಪರಿಷದ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸಲಹೆ ಸೂಚನೆಗಳನ್ನು ನೀಡಿದರು. ಭಕ್ತರ ಸಲಹೆ ಸೂಚನೆಗಳನ್ನು ಆಲಿಸಲಾಯಿತು.
ಅ.29 ರಂದು ದೇವಸ್ಥಾನದ ಒಳಾಂಗಣದಲ್ಲಿ ನಿಧಿ ಸಂಚಯನ ಸಮರ್ಪಣೆ, ಶ್ರೀ ಮಹಾಲಿಂಗೇಶ್ವರ ಸಭಾಭವನ ಲೋಕಾರ್ಪಣೆ ಹಾಗೂ ಮಾಸ್ಟರ್ ಪ್ಲಾನ್ ಕರಡು ಪ್ರತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಈ ಸಂದರ್ಭದಲ್ಲಿ ತಿಳಿಸಿದರು.
ವೇದಿಕೆಯಲ್ಲಿ ದೇವಸ್ಥಾನದ ವಾಸ್ತುತಜ್ಞ ಎನ್.ಕೆ.ಜಗನ್ನಿವಾಸ ರಾವ್, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು. ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ರಾಮದಾಸ ಗೌಡ, ರಾಮಚಂದ್ರ ಕಾಮತ್, ಡಾ.ಸುಧಾ ಎಸ್.ರಾವ್, ವೀಣಾ ಬಿ.ಕೆ. ಉಪಸ್ಥಿತರಿದ್ದರು.
ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ಸ್ವಾಗತಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.