ಪುತ್ತೂರು: ಬೇಲೂರಿನ ನಾಟ್ಯ ಮಯೂರಿ ಲಾಲಿತ್ಯ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಸುಧಾನ ವಸತಿ ಶಾಲೆಯ ಎಡ್ವರ್ಡ್ ಹಾಲ್ ನಲ್ಲಿ ಭಾನುವಾರ ನಡೆಯಿತು.

ಶ್ರೀ ಕೃಷ್ಣ ಯುವಕ ಮಂಡಲ, ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಅನೇಕ ಸಂಘ ಸಂಸ್ಥೆಗಳ ಸಹಕಾರದಲ್ಲಿ ಪ್ರಸಾದ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನುರಿತ ವೈದ್ಯರ ತಂಡ ಶಿಬಿರ ನಡೆಸಿಕೊಟ್ಟರು.
ಪುತ್ತೂರಿನ ವೈದ್ಯ ಡಾ.ಸುರೇಶ್ ಪುತ್ತೂರಾಯ ಶಿಬಿರದಲ್ಲಿ ಮಾತನಾಡಿ, ಸಕ್ಕರೆ ಖಾಯಿಲೆ ಹಾಗೂ ರಕ್ತದೊತ್ತಡ ಇರುವಂತಹ ರೋಗಿಗಳು ಪ್ರತಿ 6 ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಂತವರಿಗೆ ಹಾಗೂ ಬಡವರಿಗೆ ಇಂತಹ ಶಿಬಿರಗಳು ತುಂಬಾ ಪ್ರಯೋಜನಕಾರಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್ ಮಾತನಾಡಿ, ಇಂತಹ ಕಾರ್ಯಕ್ರಮಕ್ಕೆ ಯೋಜನೆಯಿಂದ ಯಾವಾಗಲು ಸಹಕಾರ ಇರುತ್ತದೆ ಎಂದು ತಿಳಿಸಿದರು.
ಪ್ರಸಾದ್ ನೇತ್ರಾಲಯದ ನಿಶ್ಚಿತ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಕಣ್ಣಿನ ಪರೀಕ್ಷೆ ಹಾಗೂ ಚಿಕಿತ್ಸೆಯ ಬಗ್ಗೆ ಸಲಹೆ ಸೂಚನೆ ನೀಡಿದರು.
ಸುದಾನ ಶಾಲಾ ಸಂಚಾಲಕ ರೆ| ವಿಜಯ ಹಾರ್ವಿನ್ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಇಂತಹ ಶಿಬಿರಗಳು ಅವಶ್ಯಕ ಎಂದು ತಿಳಿಸಿ ಇಂತಹ ಕಾರ್ಯಕ್ರಮಕ್ಕೆ ನಮ್ಮ ಸಂಸ್ಥೆಯಿಂದ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಪ್ರಸಾದ್ ನೇತ್ರಾಲಯದ ವೈದ್ಯರು, ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಯುವಕ ಮಂಡಲದ ಮುಖ್ಯಸ್ಥರು ಉಪಸ್ಥಿತರಿದ್ದರು. ಇದೇ ಸಂದರ್ಭ ಬೇಲೂರಿನ ನಾಟ್ಯ ಮಯೂರಿ ಲಾಲಿತ್ಯ ಕುಮಾರ್ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಅಧಿಕ ಫಲಾನುಭವಿಗಳು ತಪಾಸಣೆ ಮಾಡಿಸಿಕೊಂಡು 19 ಜನರಿಗೆ ಕನ್ನಡಕ ಹಾಗೂ 16 ಜನರಿಗೆ ಆಪರೇಷನ್ ವ್ಯವಸ್ಥೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅರೋಗ್ಯ ಇಲಾಖೆಯ ಕಾರ್ಯಕರ್ತರು, ಧರ್ಮಸ್ಥಳ ಯೋಜನೆಯ ಕಾರ್ಯಕರ್ತರು ಸಹಕಾರ ನೀಡಿದರು. ಯೋಜನೆಯ ಮೇಲ್ವಿಚಾರಕಿ ಶ್ರುತಿ ಸ್ವಾಗತಿಸಿದರು. ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ಮನೋಹರ್, ಸತ್ಯನಾರಾಯಣ್ ಭಟ್, ಗಿರೀಶ್ ಎಂ.ಎಸ್ ಹಾಗೂ ಹೊಸಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟಿನ ನವೀನ್ ಸಿಟಿಗುಡ್ಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೈಷ್ಣವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.