ಪುತ್ತೂರು : ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಪುತ್ತೂರು ರೆಡ್ ಕ್ರಾಸ್ ವತಿಯಿಂದ ಪುತ್ತೂರು ಸರಕಾರಿ ಆತ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಡಯಾಲಿಸಿಸ್ ಘಟಕಕ್ಕೆ 7.5 ಲಕ್ಷ ರೂ. ವೆಚ್ಚದಲ್ಲಿ ಡಯಾಲಿಸಿಸ್ ಯಂತ್ರವೊಂದನ್ನು ನೀಡಲಾಗಿದ್ದು, ಹಸ್ತಾಂತರ ಕಾರ್ಯಕ್ರಮ ಅ. 16ರಂದು ನಡೆಯಲಿದೆ ಎಂದು ಪುತ್ತೂರು ರೆಡ್ ಕ್ರಾಸ್ ಸಭಾಪತಿ ಎಸ್. ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಸರಕಾರಿ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ 1 ಲಕ್ಷ ರೂ. ವೆಚ್ಚದ ಮಲ್ಟಿ ಪ್ಯಾರಾ ಮಾನಿಟರ್ ಕೊಡುಗೆ ಮತ್ತು ಆಸ್ಪತ್ರೆಯ ಹೊರ ಪ್ರಾಂಗಣದ ನಿರೀಕ್ಷಣಾ ಕೊಠಡಿಗೆ 50 ಸಾವಿರ ರೂ. ವೆಚ್ಚದ ಟಿವಿ ಅಳವಡಿಸಲಾಗಿದ್ದು, ಪುತ್ತೂರು ರೆಡ್ ಕ್ರಾಸ್ ಘಟಕದಿಂದ ಪ್ರಕೃತ ವರ್ಷದಲ್ಲಿ ಒಟ್ಟು 9 ಲಕ್ಷ ರೂ. ಮೊತ್ತದ ಯಂತ್ರಗಳನ್ನು ನೀಡಿದಂತಾಗುತ್ತದೆ ಎಂದು ಹೇಳಿದರು.
2016ರಲ್ಲಿ 2 ಯೂನಿಟ್ಗಳೊಂದಿಗೆ ಪ್ರಾರಂಭವಾದ ಡಯಾಲಿಸಿಸ್ ಘಟಕದಲ್ಲಿ ಪ್ರಕೃತ 9 ಯಂತ್ರಗಳು ಕಾರ್ಯಾಚರಿಸುತ್ತಿದ್ದು, ಈವರೆಗೆ 300ಕ್ಕೂ ಮಿಕ್ಕಿ ಕಿಡ್ನಿ ವೈಫಲ್ಯದ ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪ್ರಕೃತ 98 ರೋಗಿಗಳು ಸತತ ಡಯಾಲಿಸಿಸ್ಗೆ ಒಳಪಡುತ್ತಿದ್ದು, ಇನ್ನೂ 40 ರೋಗಿಗಳು ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಭಾನುವಾರ ಹೊರತುಪಡಿಸಿ ವಾರದ 6 ದಿನಗಳಲ್ಲಿ 24 ಗಂಟೆಗಳ ಕಾಲ 5 ಪಾಳಿಗಳಲ್ಲಿ ಡಯಾಲಿಸಿಸ್ ಕೇಂದ್ರ ಕಾರ್ಯಾಚರಿಸುತ್ತಿದ್ದು 12 ಮಂದಿ ತಂತ್ರಜ್ಞರು ಸೇರಿದಂತೆ 15 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ದಿನಕ್ಕೆ 600ರಷ್ಟು ರೋಗಿಗಳನ್ನು ಉಪಚರಿಸುತ್ತಿದ್ದಾರೆ. ಈ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆ ರಾಜ್ಯದಲ್ಲಿಯೇ ಮಾದರಿ ಆಸ್ಪತ್ರೆಯಾಗಿ ಗುರುತಿಸಲ್ಪಟ್ಟಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಅವಧಿಯಲ್ಲಿ ಸುಸಜ್ಜಿತವಾದ ಕಟ್ಟಡವನ್ನು ಡಯಾಲಿಸಿಸ್ ಕೇಂದ್ರಕ್ಕೆ ನಿರ್ಮಿಸಲಾಗಿತ್ತು. ಪುತ್ತೂರು ಸರಕಾರಿ ಆಸ್ಪತ್ರೆಗೆ ಇನ್ನೂ 4 ಡಯಾಲಿಸಿಸ್ ಯಂತ್ರಗಳ ಅಗತ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿಯಾಗಿರುವ ಡಯಾಲಿಸಿಸ್ ಚಿಕಿತ್ಸೆಯು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿದ್ದು, ಅದಕ್ಕೆ ಅಗತ್ಯವಿರುವ ಲಭ್ಯ ಇಂಜೆಕ್ಷನ್ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದರಿಂದ ಪ್ರತಿ ರೋಗಿಗೆ ತಿಂಗಳಿಗೆ ರೂ. 30 ಸಾವಿರ ಉಳಿತಾಯವಾಗುತ್ತಿದೆ ಎಂದು ಅವರು ವಿವರಿಸಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಗುವುದು. ಆಸ್ಪತ್ರೆ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೆಡ್ಕ್ರಾಸ್ ಕಾರ್ಯದರ್ಶಿ ಆಸ್ಕರ್ ಆನಂದ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಯುನಿಕ್, ರೆಡ್ ಕ್ರಾಸ್ ಕಾರ್ಯಕ್ರಮ ಸಂಯೋಜನಾ ಉಪಸಮಿತಿಯ ಮುಖ್ಯಸ್ಥ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್, ನಿರ್ದೇಶಕರಾದ ನವೀನ್ ಚಂದ್ರ ನ್ಯಾಕ್, ಬಿ.ಟಿ. ಮಹೇಶ್ಚಂದ್ರ ಸಾಲಿಯಾನ್ ಉಪಸ್ಥಿತರಿದ್ದರು.