ಮಂಗಳೂರು: ಇತಿಹಾಸ ಪ್ರಸಿದ್ಧ ಮಂಗಳೂರು ಮಂಗಳಾದೇವಿ ದೇವಸ್ಥಾನದ ನವರಾತ್ರಿ ಸಂದರ್ಭ ಮಳಿಗೆಗಳಿಗೆ ಬಹಿರಂಗ ಹರಾಜು ಹಾಕುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಜಿಲ್ಲಾಡಳಿತ ಸೂಚಿಸಿದೆ. ಇದು ಹೊಸ ವಿವಾದಕ್ಕೆ ದಾರಿ ಮಾಡಿಕೊಡಲಿದ್ದು, ಮುಂದೆ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ.
ನವರಾತ್ರಿ ಉತ್ಸವ ಸಂದರ್ಭ ಮಂಗಳಾದೇವಿ ದೇವಸ್ಥಾನದ ಎದುರು ರಸ್ತೆಯ ಎರಡೂ ಬದಿಯಲ್ಲಿ ಮಳಿಗೆಗಳನ್ನು ಹಾಕಲು ಅವಕಾಶ ಕಲ್ಪಿಸಲಾಗುತ್ತದೆ. ಇದೇ ಪ್ರಕಾರ ಈ ಬಾರಿ, ದೇವಸ್ಥಾನ ಆಡಳಿತ ಮಂಡಳಿ ಏಲಂ ಪ್ರಕ್ರಿಯೆ ನಡೆಸಿಕೊಟ್ಟಿದ್ದು, 80 ಅಂಗಡಿ ಮಳಿಗೆಗಳಿಗೆ ಅನುಮತಿ ನೀಡಲಾಗಿತ್ತು. ಇದರ ನಡುವೆ, ಅಪರ ಜಿಲ್ಲಾಧಿಕಾರಿ ಜಿ. ಸಂತೋಷ್ ಕುಮಾರ್ ಅವರನ್ನು ಭೇಟಿಯಾಗಿರುವ ಬೀದಿ ಬದಿ ವ್ಯಾಪಾರಸ್ಥರ ಸಂಘ, ತಮಗಾದ ಅನ್ಯಾಯವನ್ನು ತಿಳಿಸಿ, ಮರು ಏಲಂ ನಡೆಸುವಂತೆ ಮನವಿ ಮಾಡಿಕೊಂಡಿತ್ತು.
ಇದರ ಬೆನ್ನಿಗೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ಏಲಂ ಆಗದೇ ಇರುವ ಇತರ ಮಳಿಗೆಗಳಿಗೆ ಬಹಿರಂಗ ಹರಾಜು ಮಾಡುವಂತೆ ಸೂಚಿಸಿದೆ.
ಇದನ್ನು ಖಂಡಿಸಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ, ಸಂಪ್ರದಾಯ ಮುರಿದು ಮರು ಏಲಂ ನಡೆಸದಂತೆ ಹಾಗೂ ಹೆಚ್ಚುವರಿ ಅಂಗಡಿ ಮಳಿಗೆ ನೀಡದಂತೆ ಮನವಿ ಮಾಡಿದೆ. ಒಂದು ವೇಳೆ ಸಂಪ್ರದಾಯ ಮುರಿದು ಮರು ಏಲಂ ನಡೆಸಿ ಅಥವಾ ಹೆಚ್ಚುವರಿ ಅಂಗಡಿ ನೀಡಿದಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಎಚ್ಚರಿಕೆ ನೀಡಿದ್ದಾರೆ.