ಪುತ್ತೂರು: ದೇಶಕ್ಕೆ ಸ್ವಾತಂತ್ರ್ಯೋತ್ಸವ ಸಿಕ್ಕಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಮ್ಮಿಕೊಳ್ಳಲಾದ ‘ನಮ್ಮ ಮಣ್ಣು ನಮ್ಮ ದೇಶ” ಅಭಿಯಾನದಂಗವಾಗಿ ಪುತ್ತೂರಿನಲ್ಲಿ ಸಂಗ್ರಹಿಸಲಾದ ಮಣ್ಣನ್ನು ಶುಕ್ರವಾರ ಪುತ್ತೂರು ತಾಲೂಕು ಆಡಳಿತ ಸೌಧದ ಬಳಿ ಎನ್.ಎಸ್.ಎಸ್. ಘಟಕಕ್ಕೆ ಹಸ್ತಾಂತರಿಸಲಾಯಿತು.
ಎನ್.ಎಸ್.ಎಸ್. ಘಟಕದ ಐವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಅವರು ಈ ಮಣ್ಣನ್ನು ದೆಹಲಿಗೆ ತಲುಪಿಸಲಿದ್ದಾರೆ. ಸಂತ ಫಿಲೋಮಿನಾ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿ ಮಣ್ಣು ಸ್ವೀಕರಿಸಿದರು.
ಮಣ್ಣನ್ನು ಹಸ್ತಾಂತರಿಸಿ ಮಾತನಾಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್, ನಾವು ಸ್ವಾತಂತ್ರ್ಯೋತ್ಸವದ 75 ವರ್ಷದ ಅಮೃತ ಮಹೋತ್ಸವ ಆಚರಣೆಯಲ್ಲಿದ್ದೇವೆ. ಈ ನಿಟ್ಟಿನಲ್ಲಿ ದೇಶಕ್ಕಾಗಿ ಬಲಿದಾನಗೈದ ವೀರ ಸೈನಿಕರ ನೆನಪಿಗಾಗಿ ಥೀಮ್ ಪಾರ್ಕ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ‘ನಮ್ಮ ಮಣ್ಣು ನಮ್ಮ ದೇಶ’ ಎಂಬ ಕಾರ್ಯಕ್ರಮವನ್ನು ಸರಕಾರ ದೇಶಾದ್ಯಂತ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ಪ್ರತೀ ಗ್ರಾಮ, ನಗರಸಭೆ ವ್ಯಾಪ್ತಿಯಲ್ಲಿ ಮಣ್ಣು ಸಂಗ್ರಹಿಸಿ ದೆಹಲಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಮಣ್ಣು ಹಸ್ತಾಂತರ ಕಾರ್ಯಕ್ರಮದ ಬಳಿಕ ಮಿನಿ ವಿಧಾನಸೌಧದ ಬಳಿಯಿಂದ ನಗರಸಭೆ ತನಕ ಫಿಲೋಮಿನಾ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಹಾಗೂ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು.
ನಗರಸಭೆಯಲ್ಲಿ ಮಾತನಾಡಿದ ಪೌರಾಯುಕ್ತ ಮಧು ಎಸ್. ಮನೋಹರ್, ದೇಶಕ್ಕೋಸ್ಕರ ಬಹಳಷ್ಟು ಜನ ತ್ಯಾಗ ಮಾಡಿದ್ದಾರೆ. ಥೀಮ್ ಪಾರ್ಕ್ ಮಾಡುವ ನಿಟ್ಟಿನಲ್ಲಿ ಪ್ರತೀ ಗ್ರಾಮ, ನಗರಸಭೆಯ ಎಲ್ಲಾ ವಾರ್ಡುಗಳಲ್ಲಿ ಮಣ್ಣು ಸಂಗ್ರಹಿಸಲಾಗಿದೆ. ಇದನ್ನೆ ದೆಹಲಿಗೆ ತಲುಪಿಸುವ ಸಲುವಾಗಿ ಸಂತ ಫಿಲೋಮಿನಾ ಹಾಗೂ ವಿವೇಕಾನಂದ ಕಾಲೇಜಿನ ನಗರಸಭಾ ವ್ಯಾಪ್ತಿಯ ಐದು ಮಂದಿ ವಿದ್ಯಾರ್ಥಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ತಹಶೀಲ್ದಾರ್ ಶಿವಶಂಕರ್ ಜೆ., ಮತ್ತಿತರರು ಉಪಸ್ಥಿತರಿದ್ದರು.