ಮಂಗಳೂರು: ಜನನ ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ. ಬೇರೆ ದಾಖಲೆಗಳಾದ ಲೈಸನ್ಸ್ ಮುಂತಾದ ದಾಖಲೆಗಳನ್ನು ಬಳಸಬಹುದು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಮರಣ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನನ ಮರಣ ನೋಂದಣಿಯಲ್ಲಿ ಯಾವುದೇ ವಿಳಂಬ ಹಾಗೂ ಸಾಮಾನ್ಯ ಜನರು ತೊಂದರೆಗಳಿಗೆ ಒಳಗಾಗಬಾರದು. ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿಯಾಗುವ ಮರಣ ಘಟನೆಗಳಿಗೆ ಮರಣ ಕಾರಣಗಳನ್ನು ಸರಿಯಾಗಿ ನಮೂದಿಸಬೇಕು ಎಂಬ ಕಾರಣಕ್ಕಾಗಿ ಆಧಾರ್ ಕಡ್ಡಾಯವಲ್ಲ. ಮಾತ್ರವಲ್ಲ, ಗ್ರಾಮ ಒನ್ ಕಚೇರಿಯಲ್ಲಿ ಕೂಡ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಸೆಕ್ಷನ್ 18ರ ಪ್ರಕಾರ ಜಿಲ್ಲೆಯ ಎಲ್ಲಾ ನೋಂದಣಿ ಘಟಕವು ನಿಯಾಮಾನುಸಾರ ನೋಂದಣಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಶೇಕಡ 100ರಷ್ಟು ಘಟನೆಗಳು ದಾಖಲಾತಿಯಾಗಿರುವ ಬಗ್ಗೆ ಪರಿಶೀಲನೆಯನ್ನು ಕಂದಾಯ ಇಲಾಖೆ, ನಗರ ಅಭಿವೃದ್ಧಿ, ಸಾಂಖ್ಯಿಕ ಇಲಾಖೆ ಅಧಿಕಾರಿಗಳು ನಡೆಸಬೇಕು. ಪರಿಶೀಲನಾ ವರದಿಯನ್ನು ಪ್ರತಿ ತ್ರೈಮಾಸಿಕಕ್ಕೆ ಕಳುಹಿಸಬೇಕಾಗಿರುತ್ತದೆ ಎಂದರು.